ತಿ.ನರಸೀಪುರ: ಮುಡುಕತೊರೆಯಲ್ಲಿ ಮುಂದಿನ ಡಿಸೆಂಬರ್‌ನೊಳಗೆ ಮೊದಲ ಹಂತದಲ್ಲಿ ಶ್ರೀ ಭ್ರಮರಾಂಬ ಶ್ರೀ ಮಲ್ಲಿಕಾರ್ಜುನ ದೇವಾಲಯ ಜೀರ್ಣೋದ್ಧಾರ ಕಾಮಗಾರಿ ಪೂರ್ಣಗೊಳಿಸಿ, ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ಉತ್ಸವಗಳಿಗೆ ಅನುವು ಮಾಡಿಕೊಡಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಭರವಸೆ ನೀಡಿದರು.
ತಾಲೂಕಿನ ಮುಡುಕತೊರೆಯಲ್ಲಿ ಶನಿವಾರ ಸಂಜೆ ಶ್ರೀ ಭ್ರಮರಾಂಬ ಶ್ರೀ ಮಲ್ಲಿಕಾರ್ಜುನ ದೇವಾಲಯ ಜೀರ್ಣೋದ್ಧಾರ ಕಾಮಗಾರಿ ಪರಿಶೀಲಿಸಿ, ಸಮೂಹ ದೇವಾಲಯಗಳ ವ್ಯವಸ್ಥಾಪನ ಸಮಿತಿ ಹಾಗೂ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.
ಮೊದಲ ಹಂತದಲ್ಲಿ ಗರ್ಭಗುಡಿ ಮತ್ತು ನೆಲಮಟ್ಟದ ಕಾಮಗಾರಿಯನ್ನು ಡಿಸೆಂಬರ್ ಒಳಗೆ ಪೂರ್ಣಗೊಳಿಸಿ, ದಿನನಿತ್ಯದ ಧಾರ್ಮಿಕ ಉತ್ಸವ ಮತ್ತು ಜಾತ್ರೋತ್ಸವ ಆಚರಣೆಗೆ ಅವಕಾಶ ಮಾಡಿಕೊಡಲಾಗುವುದು ಎಂದರು.
ಜೀಣೋದ್ಧಾರಕ್ಕೆ ದೇವಾಲಯವನ್ನು ಕೆಡವಿರುದರಿಂದ ಲಕ್ಷಾಂತರ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದೆ. ಇನ್ನು ವಿಳಂಬ ಮಾಡುವುದು ಸರಿಯಲ್ಲ. ಪ್ರವಾಸೋದ್ಯಮ ಇಲಾಖೆ ಅನುದಾನ ಹಾಗೂ ಭಕ್ತರ ದೇಣಿಗೆ ಹಣದಿಂದ ದೇವಾಲಯ ಜೀರ್ಣೋದ್ಧಾರ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರ ರಾಜ್ಯ ಸರ್ಕಾರದಿಂದ ಯೋಜನಾ ವೆಚ್ಚದ ಅನುದಾನ ಮಂಜೂರು ಮಾಡಲಾಗುವುದು. ಹಾಗೆಯೇ ತಾಲೂಕು ಕೇಂದ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಮತ್ತು ಶಾಶ್ವತ ಯೋಜನೆಗಳ ಅನುಷ್ಠಾನವನ್ನು ನಮ್ಮ ಸರ್ಕಾರದ ಅವಧಿಯಲ್ಲಿ ಮಾಡುತ್ತೇವೆ ಎಂದು ಡಾ.ಎಚ್.ಸಿ.ಮಹದೇವಪ್ಪ ಭರವಸೆ ನೀಡಿದರು.
ತಲಕಾಡು ಸಮೂಹ ದೇವಾಲಯಗಳ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಂ. ನಾಗರಾಜು ಮಾತನಾಡಿ, ದೇವಾಲಯ ಚಂದ್ರ ಶಾಲೆಗೆ ತುರ್ತಾಗಿ 20 ಕೋಟಿ ರೂ.ಗಳನ್ನು ಸರ್ಕಾರದಿಂದ ಮಂಜೂರು ಮಾಡಲೇಬೇಕು. ಗೋಪುರ, ಪ್ರವೇಶ ದ್ವಾರ ಹಾಗೂ ಎರಡು ಬದಿಯಲ್ಲಿ ನಂದಿಗಳನ್ನು ಪ್ರತಿಷ್ಠಾಪಿಸಲು 20 ಕೋಟಿ ರೂ. ಬೇಕು. ಶ್ರೀ ಭ್ರಮರಾಂಬ ಮತ್ತು ಶ್ರೀ ಮಲ್ಲಿಕಾರ್ಜುನಸ್ವಾಮಿ ಗರ್ಭಗುಡಿಗಳ ಯೋಜನಾ ವೆಚ್ಚವೇ ಬದಲಾಗಿದೆ. ರಾಜ್ಯ ಸರ್ಕಾರ ಮಂಜೂರು ಮಾಡಿರುವ 3.40 ಕೋಟಿ ರೂ. ಹಾಗೂ ಭಕ್ತರ ದೇಣಿಗೆ 2.90 ಕೋಟಿ ರೂ. ಯಾವುದಕ್ಕೂ ಸಾಲುವುದಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಧಾರ್ಮಿಕ ಉತ್ಸವಗಳಿಗೆ ಹಿನ್ನಡೆಯಾಗಿದೆ. ಹಾಗಾಗಿ ದೇವಾಲಯ ಜೀರ್ಣೋದ್ಧಾರಕ್ಕೆ ಅನುದಾನದ ಮಂಜೂರು ಜರೂರಾಗಿ ಆಗಬೇಕು ಎಂದು ಸಚಿವರ ಗಮನಕ್ಕೆ ತಂದರು.
ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳಾದ ಹಂಚ್ಯಾ ಮಹೇಶ್ ಹಾಗೂ ಪಿ.ಎಂ.ಪರಶಿವಮೂರ್ತಿ ಅವರು ಸರ್ಕಾರ ಅನುದಾನ ಮಂಜೂರು ವಿಳಂಬ ಮಾಡುತ್ತಿರುವುದರಿಂದ ಭಕ್ತರಿಂದ ದೇಣಿಗೆ ಸಂಗ್ರಹಿಸಿ, ಕಾಮಗಾರಿ ನಿಲ್ಲದಂತೆ ನೋಡಿಕೊಳ್ಳುತ್ತಿದ್ದೇವೆ. ಹಾಗಾಗಿ ಜೀರ್ಣೋದ್ಧಾರ ಸಮಿತಿಗೆ ಕಾಮಗಾರಿ ಹೊಣೆಯನ್ನು ನೀಡಬೇಕು ಎಂದು ಒತ್ತಾಯಿಸಿದರು.
ಹಿರಿಯ ಅರ್ಚಕ ವಿಶ್ವನಾಥ್ ಮಾತನಾಡಿ, ದೇವಾಲಯದಲ್ಲಿ ಧ್ವಜಸ್ತಂಬ ನಿರ್ಮಾಣ ಮಾಡಿದರಷ್ಟೇ ಜಾತ್ರೋತ್ಸವದ ವೇಳೆ ಧಾರ್ಮಿಕ ಉತ್ಸವ ಕಾರ್ಯಗಳಿಗೆ ಚಾಲನೆ ನೀಡಲು ಸಾಧ್ಯ. ಇಲ್ಲವಾದರೆ ದೇವಾಲಯದಲ್ಲಿನ ಗರ್ಭಗುಡಿಯಲ್ಲಿ ಪೂಜೆಗಳಿಗಷ್ಟೇ ಜಾತ್ರೋತ್ಸವ ಸೀಮಿತಗೊಳ್ಳಲಿದೆ ಎಂದು ಸಚಿವರ ಗಮನಕ್ಕೆ ತಂದರು.
ಬಸವ ಭವನಕ್ಕೆ ನಿವೇಶನ: ದೇವಾಲಯ ಜೀರ್ಣೋದ್ಧಾರ ಕಾಮಗಾರಿಯನ್ನು ವೀಕ್ಷಿಸಿ, ನಿರ್ಗಮಿಸುವ ವೇಳೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಭೇಟಿಯಾದ ಜಾಗತಿಕ ಲಿಂಗಾಯಿತ ಮಹಾಸಭಾ ಅಧ್ಯಕ್ಷ ತೊಟ್ಟವಾಡಿ ರವಿ ಹಾಗೂ ಮುಖಂಡ ಚಂದ್ರಧರ ಅವರು ಬಸವ ಭವನಕ್ಕೆ ನಿವೇಶನ ಮತ್ತು ಅನುದಾನ ಮಂಜೂರು ಮಾಡುವಂತೆ ಮನವಿ ಮಾಡಿದರು. ಕೂಡಲೇ ಪ್ರತಿಕ್ರಿಸಿದ ಸಚಿವರು ಜತೆಯಲ್ಲೇ ಇದ್ದ ಜಿಲ್ಲಾಧಿಕಾರಿಗಳಿಗೆ ತಾಲೂಕು ಮಟ್ಟದಲ್ಲಿ ಬಸವ ಭವನ ನಿರ್ಮಾಣಕ್ಕೆ ಸೂಕ್ತ ನಿವೇಶನ ಕಲ್ಪಿಸಿ ಕೊಡುವಂತೆ ಸೂಚಿಸಿದರು.
ಮುರಾರ್ಜಿ ಶಾಲೆಯಲ್ಲಿ ಪಿಯು ತರಗತಿ: ಬಳಿಕ ಪಕ್ಕದ ಬೆಟ್ಟದಲ್ಲಿರುವ ಮೋರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿದ ಒಂದು ಸುತ್ತು ಹಾಕಿದ ಸಚಿವರು ಪರಿಶೀಲಿಸಿದರು. ಉತ್ತಮ ಪ್ರದೇಶದಲ್ಲಿ ಸುಸಜ್ಜಿತವಾಗಿರುವ ಶಾಲೆಯಲ್ಲಿ ಪಿಯು ತರಗತಿಗಳನ್ನ ಆರಂಭಿಸುವಂತೆ ಪೋಷಕರು. ಅಲ್ಲದೆ ಸ್ಥಳೀಯರು ಮನವಿ ಮಾಡಿದ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಶಾಲೆಯಲ್ಲಿನ ತರಗತಿಗಳನ್ನ ಮೇಲ್ದರ್ಜೆಗೇರಿಸಲಾಗುವುದು ಎಂದು ಮಹದೇವಪ್ಪ ಭರವಸೆ ನೀಡಿದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತ್ ರೆಡ್ಡಿ, ಪೋಲಿಸ್ ವರಿಷ್ಠಾಧಿಕಾರಿ, ವಿಷ್ಣುವರ್ಧನ, ಜಿಪಂ ಸಿಇಒ ಯುಕೇಶ್ ಕುಮಾರ್, ಸಚಿವರ ಕರ್ತವ್ಯ ಅಧಿಕಾರಿ ಎನ್.ರವಿಕುಮಾರ್, ಕಾರ್ಯಪಾಲಕ ಇಂಜಿನಿಯರ್‌ಗಳಾದ ರಾಜು, ಹಿರಣ್ಣಯ್ಯ, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳಾದ ಎಸ್. ಸತೀಶ್ ಚಂದ್ರನ್, ಪಿ.ಎನ್.ಚರಿತಾ, ಕೆ.ಶಿವರಾಜು, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಂಗೇಗೌಡ, ಸಹಾಯಕ ನಿರ್ದೇಶಕ ರಾಮೇಗೌಡ, ತಹಸೀಲ್ದಾರ್ ಸುರೇಶ್ ಆಚಾರ್, ಸಮೂಹ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಂ.ವೆಂಕಟೇಶ್ ಪ್ರಸಾದ್, ಸಹಾಯಕ ಎಂ.ಎಸ್.ವಿಕಾಸ್, ತಾಪಂ ಮಾಜಿ ಸದಸ್ಯರಾದ ಕುಕ್ಕುರು ಗಣೇಶ್, ನರಸಿಂಹ ಮಾದನಾಯಕ, ಮಲ್ಲಾಜಮ್ಮ, ವೀಣಾ ಶಿವಕುಮಾರ್, ಶೆಟ್ಟಹಳ್ಳಿ ಗ್ರಾಪಂ ಅಧ್ಯಕ್ಷೆ ಪುಟ್ಟಮ್ಮ ಶಂಭು, ಉಪಾಧ್ಯಕ್ಷ ದಕ್ಷಿಣಮೂರ್ತಿ, ಅಭಿವೃದ್ಧಿ ಅಧಿಕಾರಿ ಕೆ.ಪಿ.ಕೆಂಪೇಗೌಡ, ತಲಕಾಡು ಪಿಡಿಒ ಟಿ.ಎಂ. ಮಾದೇಶ್, ಮಾಜಿ ಅಧ್ಯಕ್ಷ ಕಾವೇರಿಪುರ ಶಾಂತರಾಜು, ಮಲ್ಲಣ್ಣಿ, ಮುಖ್ಯ ಅಧಿಕಾರಿಗಳಾದ ಬಿ.ಕೆ.ವಸಂತ ಕುಮಾರಿ, ಆರ್. ಹೇಮಂತ್ ರಾಜ್, ಹಿಂದುಳಿದ ವರ್ಗಗಳ ಇಲಾಖೆ ವಿಸ್ತರಣಾಧಿಕಾರಿ ಎಂ.ರಾಜಣ್ಣ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಟಿ.ಬೆಟ್ಟಹಳ್ಳಿ ಕೋಕಿಲ, ಆರ್.ಮಾದೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ಬಸವರಾಜು, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎ.ಎನ್.ಸ್ವಾಮಿ, ಮುಖಂಡರಾದ ವಿಜಯಕುಮಾರ್, ಮಹೇಂದ್ರ ಇತರರಿದ್ದರು.