ಕಲಾದಗಿ: ಸಮೀಪದ ಹಿರೇಶೆಲ್ಲಿಕೇರಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಳೆದ ಎರಡ್ಮೂರು ವರ್ಷಗಳಿಂದ ಅಪೂರ್ಣ ಸ್ಥಿತಿಯಲ್ಲಿರುವ ಶೌಚಗೃಹ ಕಾಮಗಾರಿ ಪೂರ್ಣಗೊಳಿಸುವಂತೆ ಹಿರೇಶೆಲ್ಲಿಕೇರಿ ಗ್ರಾಪಂ ಪಿಡಿಒ ವೈಶಾಲಿ ಬೈರಶೆಟ್ಟಿ ಅವರಿಗೆ ತಾಪಂ ಇಒ ಸುಭಾಷ ಸಂಪಗಾವಿ ತಾಕೀತು ಮಾಡಿದರು.
ಎಸ್‌ಡಿಎಂಸಿ ಹಾಗೂ ಸ್ಥಳೀಯರು ಅಪೂರ್ಣ ಕಾಮಗಾರಿ ಕುರಿತು ಇಒ ಅವರ ಗಮನ ಸೆಳೆದ ಹಿನ್ನೆಲೆಯಲ್ಲಿ ಭೇಟಿ ನೀಡಿ ಕಾಮಗಾರಿ ಅರ್ಥಕ್ಕೆ ನಿಂತಿರುವುದನ್ನು ವೀಕ್ಷಿಸಿ, ಪಿಡಿಒ ಅವರಿಂದ ಮಾಹಿತಿ ಪಡೆದರು. ತಿಂಗಳೊಳಗೆ ಅಪೂರ್ಣವಾಗಿರುವ ಶೌಚಗೃಹ ಕಾಮಗಾರಿ ಸಂಪೂರ್ಣಗೊಳಿಸಬೇಕು ಎಂದು ಪಿಡಿಒಗೆ ಸೂಚಿಸಿದರು.
ಅಪೂರ್ಣಗೊಂಡಿರುವ ಶೌಚಗೃಹದ ಇನ್ನುಳಿದ ಕಾಮಗಾರಿಯನ್ನೂ ಈ ಹಿಂದೆ ಕಾಮಗಾರಿ ಮಾಡಿದವರಿಂದಲೇ ಮಾಡಿಸಬೇಕು. ಇದಕ್ಕಾಗಿ ಗ್ರಾಪಂನಿಂದ ಮತ್ತಷ್ಟು ಅನುದಾನ ಬಿಡುಗಡೆ ಮಾಡವಂತಿಲ್ಲ ಎಂದು ಸ್ಥಳೀಯ ಮುಖಂಡ ಪಕೀರಪ್ಪ ಮಾದರ ಆಗ್ರಹಿಸಿದರು.
ಗ್ರಾಪಂ ಅಧ್ಯಕ್ಷೆ ಗೀತಾ ನಾಯ್ಕರ ಇದ್ದರು.