ಮಡಿಕೇರಿ: ನಗರದ ಕೋಟೆ ನವೀಕರಣ ಕಾಮಗಾರಿ ನಡೆಯುತ್ತಿದ್ದು, ಈ ಸಂಬಂಧ ರಾಜ್ಯ ಹೈಕೋರ್ಟ್ ನಿರ್ದೇಶನದಂತೆ ತ್ವರಿತವಾಗಿ ಕಾಮಗಾರಿ ಕೈಗೊಳ್ಳಲು ಪ್ರ್ರಾಚ್ಯವಸ್ತು ಇಲಾಖೆಗೆ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಹೇಳಿದರು.
ನಗರದ ಕೋಟೆಯಲ್ಲಿ ನವೀಕರಣವಾಗುತ್ತಿರುವ ಕಾಮಗಾರಿ ಸಂಬಂಧಿಸಿದಂತೆ ಬುಧವಾರ ಭೇಟಿ ನೀಡಿ ಎಲ್ಲಾ ವಿಭಾಗಗಳನ್ನು ಪರಿಶೀಲಿಸಿ ಮಾತನಾಡಿದರು.
ಕೋಟೆ ನವೀಕರಣ ಕಾಮಗಾರಿ ನಡೆಯುತ್ತಿದೆ. ಎಲ್ಲಾ ವಿಭಾಗಗಳನ್ನು ಪರಿಶೀಲಿಸಲಾಗಿದ್ದು, ರಾಜ್ಯ ಹೈಕೋರ್ಟ್ ನಿರ್ದೇಶನದಂತೆ ಆದಷ್ಟು ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಲು ಪ್ರ್ರಾಚ್ಯವಸ್ತು ಇಲಾಖೆಗೆ ತಿಳಿಸಲಾಗಿದೆ ಎಂದರು.
ಪ್ರಾಚ್ಯವಸ್ತು ಇಲಾಖೆಯ ಅಧೀಕ್ಷಕ ಬಿಪಿನ್ ಚಂದ್ರನೇಗಿ ಮಾತನಾಡಿ, ೨೦೨೩ ಆಗಸ್ಟ್-ಸೆಪ್ಟೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ನಿವೃತ್ತ ಮಾಹಿತಿ ಆಯುಕ್ತ ವಿರೂಪಾಕ್ಷಯ್ಯ ಮಾತನಾಡಿ, ರಾಜ್ಯ ಸರ್ಕಾರವು ೧೦.೯೩ ಕೋಟಿ ರೂ.ವನ್ನು ಕೋಟೆ ನವೀಕರಣಕ್ಕೆ ಬಿಡುಗಡೆ ಮಾಡಿದ್ದು, ಹಣ ಹಸ್ತಾಂತರಿಸಲಾಗಿದೆ. ಆದರೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಈ ಸಂಬಂಧ ರಾಜ್ಯ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಅದರಂತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿತ್ತು. ಆದರೂ ಸಹ ತ್ವರಿತವಾಗಿ ಕಾಮಗಾರಿ ನಡೆಯುತ್ತಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದ ಅವರು, ರಾಜರ ಗದ್ದುಗೆ ಅಭಿವೃದ್ಧಿಗೂ ಸಹ ಒತ್ತು ನೀಡಬೇಕಿದೆ ಎಂದು ತಿಳಿಸಿದರು.
ಬಳಿಕ ಕೋಟೆ ನವೀಕರಣ ಕಾಮಗಾರಿ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶರವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಾಮಗಾರಿ ಟೆಂಡರ್, ಕಾಮಗಾರಿಯ ವಿವಿಧ ಹಂತಗಳು, ಮತ್ತಿತರ ಸಂಬಂಧ ಸುದೀರ್ಘ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಉಪ ಅಧೀಕ್ಷಕ ಎಂಜಿನಿಯರ್ ಸೋಮ್ಲ ನಾಯಕ್, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ತಹಶೀಲ್ದಾರ್ ಮಹೇಶ್, ಲೋಕೋಪಯೋಗಿ ಇಲಾಖೆ ಇಇ ನಾಗರಾಜು, ಪ್ರಾಚ್ಯವಸ್ತು ಇಲಾಖೆಯ ಕ್ಯೂರೇಟರ್ ರೇಖಾ, ವಕೀಲರಾದ ಎನ್.ನರೇಂದ್ರ ಕಾಮತ್ ಇತರರು ಇದ್ದರು.