ಬೆಂಗಳೂರು: ನಿಧಾನವಾಗಿ ನಡೆಯುತ್ತಿರುವ ಈಜೀಪುರ ಮೇಲ್ಸೇತುವೆ ಕಾಮಗಾರಿಗೆ ಬೇಕಿರುವ ಜಾಗವನ್ನು ಭೂಸ್ವಾಧೀನ ಪಡಿಸಿಕೊಂಡು ತ್ವರಿತವಾಗಿ ಪೂರ್ಣಗೊಳಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಪಾಲಿಕೆಯ ದಕ್ಷಿಣ ವಲಯದ ಡೇರಿ ವೃತ್ತದ ಬಳಿಯಿರುವ ಕ್ರೈಸ್ಟ್ ಕಾಲೇಜು ಬಳಿಯಿಂದ ಸೇಂಟ್ ಜಾನ್ಸ್ ಕಾಲೇಜು ಜಂಕ್ಷನ್, ಮಡಿವಾಳ ಕೆಳಸೇತುವೆ, ಕೋರಮಂಗಲ 100 ಅಡಿ ರಸ್ತೆ, ಈಜೀಪುರ ಮೇಲ್ಸೇತುವೆ ರಸ್ತೆ, ಸೋನಿ ಜಂಕ್ಷನ್ ವರೆಗೆ 3.5 ಕಿ.ಮೀ. ನಡಿಗೆ ಮೂಲಕ ರಸ್ತೆ ಹಾಗೂ ಪಾದಚಾರಿ ಮಾರ್ಗವನ್ನು ಶುಕ್ರವಾರ ಪರಿಶೀಲಿಸಿದ ವೇಳೆ ಅವರು ಈ ಸೂಚನೆ ನೀಡಿದರು.
ಈಜೀಪುರ ಮೇಲ್ಸೇತುವೆ ಮೇಲ್ಭಾಗಕ್ಕೆ ತೆರಳಿ ಕಾಮಗಾರಿ ಪ್ರಗತಿ ವೀಕ್ಷಿಸಿದ ಮುಖ್ಯ ಆಯುಕ್ತರು, ಅಲ್ಲಿನ ಕಾಮಗಾರಿ ನಡೆಯುತ್ತಿರುವ ವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು. ಬಾಕಿ ಕೆಲಸವನ್ನು ಆದ್ಯತೆ ಮೇಲೆ ಕೈಗೆತ್ತಿಕೊಂಡು ಬೇಗನೆ ಸಾರ್ವಜನಿಕರ ಸೇವೆಗೆ ಅನುವು ಮಾಡಿಕೊಡಬೇಕು ಎಂದು ಗುತ್ತಿಗೆದಾರರಿಗೆ ಖಡಕ್ ಎಚ್ಚರಿಕೆ ನೀಡಿದರು.
ಸೇಂಟ್ ಜಾನ್ಸ್ ಆಸ್ಪತ್ರೆ ಬಳಿ ರಾಂಪ್‌ಗೆ ಅಗತ್ಯವಿರುವ ಜಾಗವನ್ನು ಭೂಸ್ವಾಧೀನ ಪಡಿಸಿಕೊಳ್ಳಬೇಕಿದೆ. ಇದಕ್ಕಾಗಿ ಸಂಧಿಸಿದವರೊಂದಿಗೆ ಸಭೆ ಆಯೋಜಿಸಿ ಕೂಡಲೇ ಅಗತ್ಯ ಜಾಗವನ್ನು ಭೂಸ್ವಾಧೀನ ಮಾಡಿಕೊಳ್ಳಬೇಕು. ಬಳಿಕ ರಾಂಪ್ ಕಾಮಗಾರಿಯನ್ನು ಕೈಗೆತ್ತಿಕೊಂಡು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಫುಟ್‌ಪಾತ್ ದುರಸ್ತಿಗೊಳಿಸಿ:
ಮೇಲ್ಸೇತುವೆಯ ಕೆಳಭಾಗದ ರಸ್ತೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ರಸ್ತೆಯ ಎರಡೂ ಬದಿಯ ಪಾದಚಾರಿ ಮಾರ್ಗಗಳ ನಿರ್ವಹಣೆ ಸರಿಯಾಗಿ ಇಲ್ಲದಿರುವುದನ್ನು ಕಂಡು ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಲು ಹಾಗೂ ಮಳೆನೀರು ಚರಂಡಿಗಳಿಗೆ ಸರಾಗಿ ಹರಿದು ಹರಿಯುವಂತೆ ವ್ಯವಸ್ಥೆ ಮಾಡಲು ಗುತ್ತಿಗೆದಾರರಿಗೆ ಸೂಚಿಸಲಾಯಿತು.
ಈ ವೇಳೆ ದಕ್ಷಿಣ ವಲಯ ಆಯುಕ್ತ ದಿಗ್ಜಯ್ ಬೋಡ್ಕೆ, ಮುಖ್ಯ ಅಭಿಯಂತರ ಡಾ. ರಾಘವೇಂದ್ರ ಪ್ರಸಾದ್, ಕಾರ್ಯಪಾಲಕ ಅಭಿಯಂತರರು ಹಾಜರಿದ್ದರು.
ಜಂಕ್ಷನ್ ಅಭಿವೃದ್ಧಿಪಡಿಸಿ:
ಮಡಿವಾಳ ಕೆಳಸೇತುವೆಯ ಮೇಲ್ಭಾಗದಲ್ಲಿರುವ ಜಂಕ್ಷನ್ ಬಳಿ ಪಾದಚಾರಿ ಮಾರ್ಗಗಳು, ರಸ್ತೆ ಅಭಿವೃದ್ಧಿ ಸೇರಿ ಸಮಗ್ರ ಅಭಿವೃದ್ಧಿ ಕೈಗೊಳ್ಳಬೇಕು. ಜಂಕ್ಷನ್‌ನಲ್ಲಿರುವ ಪೊಲೀಸ್ ಚೌಕಿಯಿಂದ ಪಾದಚಾರಿಗಳ ಓಡಾಟಕ್ಕೆ ಸಮಸ್ಯೆಯಾಗಲಿದ್ದು, ಅದನ್ನು ಸರಿಪಡಿಸುವಂತೆ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.