ಹನೂರು: ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ ಸರತಿ ಸಾಲಿನ ಸಂಕೀರ್ಣ ಕಾಮಗಾರಿ, ಮೆಟ್ಟಿಲು ನಿರ್ಮಾಣ ಸೇರಿದಂತೆ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಶಾಸಕ ಎಂ.ಆರ್.ಮಂಜುನಾಥ್ ಸೂಚಿಸಿದರು.
ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.
ಮ.ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ಆಗಮಿಸುವ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತಾಳುಬೆಟ್ಟದಿಂದ ಮ.ಬೆಟ್ಟದವರೆಗೆ ಮೆಟ್ಟಿಲು ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಭಕ್ತರು ಸುಸೂತ್ರವಾಗಿ ದೇವರ ದರ್ಶನ ಪಡೆಯಲು ಕೈಗೊಂಡಿರುವ ಸರತಿ ಸಾಲಿನ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರ ಪೂರ್ಣಗೊಳಿಸುವುದರ ಮೂಲಕ ಭಕ್ತರ ಸೇವೆಗೆ ನೀಡಬೇಕು. ಅನುಮೋದನೆಯಾಗಿರುವ ನೂತನ ದಾಸೋಹ ಭವನ ಹಾಗೂ ಡಾರ್ಮೆಟರಿ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಸರ್ವೇ ನಡೆಸಿ ವರದಿ ಸಲ್ಲಿಸಿ: ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಮಾತನಾಡಿ, ಮಾಸ್ಟರ್ ಪ್ಲಾೃನ್ ಆವರಣದಲ್ಲಿನ ಸುಮಾರು 1,043 ಎಕರೆಯನ್ನು ಭೂ ಮಾಪನ ಇಲಾಖೆಯ ಅಧಿಕಾರಿಗಳು ಸರ್ವೇ ಕಾರ್ಯ ನಡೆಸಿ 15 ದಿನದೊಳಗೆ ವರದಿ ಸಲ್ಲಿಸಬೇಕು. ದೀಪದಗಿರಿ ಒಡ್ಡುವಿನಲ್ಲಿ ವಾಸವಿರುವ ಜನರನ್ನು ಮನವೊಲಿಸಿ ಬೇರೆಡೆ ಜಾಗ ನೀಡಲು ಅಗತ್ಯ ಕ್ರಮ ವಹಿಸಬೇಕು. ಇನ್ನು ವಜ್ರಮಲೆ ಭವನಕ್ಕೆ ಅಗತ್ಯ ಪೀಠೋಪಕರಣ ಒದಗಿಸುವ ಸಂಬಂಧ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಸೌಕರ್ಯ ಒದಗಿಸಿ ಭಕ್ತರ ಸೇವೆಗೆ ನೀಡಬೇಕು. ಜಮೀನು ಹಕ್ಕು ಪತ್ರ ನೀಡುವ ಸಂಬಂಧ ವಹಿಸುವ ಕೆಲಸ ತ್ವರಿತವಾಗಬೇಕು ಎಂದು ಸೂಚಿಸಿದರು.
ಇದೇ ವೇಳೆ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೆ ಸಂಬಂಧಪಟ್ಟವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ, ತಾಪಂ ಉಮೇಶ್ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಜಿಪಂ ಸಿಇಒ ಮೋನಾರೋತ್, ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು, ತಹಸೀಲ್ದಾರ್ ವೈ.ಕೆ.ಗುರುಪ್ರಸಾದ್, ಎಡಿಎಲ್‌ಆರ್ ವಿದ್ಯಾರಾಣಿ, ಪಿಡಬ್ಲ್ಯುಡಿ ಇಇ ಕಿರಣ್, ಎಇಇ ಚಿನ್ನಣ್ಣ ಇತರರು ಇದ್ದರು.