ಕಂಪ್ಲಿ: ಕಾಲುವೆಗಳ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಇಲ್ಲಿನ ರಾಜ್ಯ ಕಿಸಾನ್ ಜಾಗೃತಿ ಸಂಘದ ಪದಾಧಿಕಾರಿಗಳು ಗುರುವಾರ ಮುನಿರಾಬಾದ್‌ನಲ್ಲಿ ಮುಖ್ಯ ಇಂಜಿನಿಯರ್ ಡಿ.ಹನುಮಂತಪ್ಪಗೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಕ್ಷ ಬಿ.ಗಂಗಾಧರ ಮಾತನಾಡಿ, ಕಂಪ್ಲಿ, ಬೆಳಗೋಡ್‌ಹಾಳ್, ರಾಮಸಾಗರ ವಿಜಯನಗರ ಕಾಲುವೆಗಳ ಕಾಮಗಾರಿ ಏಳು ಕ್ಲೋಸರ್ ಅವಧಿಯಾದರೂ ಮುಗಿದಿಲ್ಲ. ನಾಲ್ಕು ದಿನಗಳಿಂದ ಸಿಮೆಂಟ್ ಸರಬರಾಜಿಲ್ಲದೆ ಕಾಮಗಾರಿ ಸ್ಥಗಿತಗೊಂಡಿದೆ.
ಎಫ್‌ಐಸಿ ಕ್ರಾಸಿಂಗ್ ಕಾಮಗಾರಿ ನೆರವೇರಿಲ್ಲ. ಇದರಿಂದಾಗಿ ಹಿಂಗಾರು ಹಂಗಾಮಿಗೆ ರೈತರ ಬೆಳೆಗೆ ನೀರು ಸಿಗುವುದು ಕಷ್ಟವಾಗುತ್ತದೆ. ನಿಗದಿತ ಸಮಯದಲ್ಲಿ ಕಾಮಗಾರಿ ನಿರ್ವಹಿಸದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘದ ಯುವ ಘಟಕ ಜಿಲ್ಲಾಧ್ಯಕ್ಷ ಕೆ.ಹರ್ಷಿತ್, ತಾಲೂಕು ಗೌರವಾಧ್ಯಕ್ಷ ಬಿ.ವಾಬುಸಾಬ್, ಉಪಾಧ್ಯಕ್ಷ ಗಾದಿಲಿಂಗಪ್ಪ, ಕಾರ್ಯದರ್ಶಿ ಸಿ.ಮುಸ್ತಫಾ, ರಾಮಸಾಗರ ಗ್ರಾಮ ಘಟಕ ಅಧ್ಯಕ್ಷ ಜೆ.ಮಂಜುನಾಥ ಇದ್ದರು.