pardಬಾಗಲಕೋಟೆ-ಕುಡಚಿ ರೈಲು ಮಾರ್ಗವನ್ನು 2024ರ ಅಂತ್ಯದೊಳಗೆ ಪೂರ್ಣಗೊಳಿಸಲು ಆಗ್ರಹಿಸಿ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ನಿಯೋಗ ದೆಹಲಿಯಲ್ಲಿ ಕೇಂದ್ರ ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ ಅವರನ್ನು ಸೊಮವಾರ ಸಂಜೆ ಭೇಟಿ ಮಾಡಿ ಮನವಿ ಸಲ್ಲಿಸಿತು. ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ್ ಖಾಜಿ, ಉಪಾಧ್ಯಕ್ಷ ಶ್ರೀನಿವಾಸ ಬಳ್ಳಾರಿ ಇತರರು ಇದ್ದರು. 
ಜಿಲ್ಲೆ

ಬಾಗಲಕೋಟೆ-ಕುಡಚಿ ರೈಲು ಮಾರ್ಗ ಪೂರ್ಣಗೊಳಿಸಿ

Vijayapura - Desk - Gurappa Lokuri

ಆಮೆಗತಿಯಲ್ಲಿ ಸಾಗಿರುವ ಬಾಗಲಕೋಟೆ-ಕುಡಚಿ ರೈಲು ಮಾರ್ಗವನ್ನು 2024ರ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಆಗ್ರಹಿಸಿ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ.

ಈ ಬಗ್ಗೆ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ್ ಖಾಜಿ ನೇತೃತ್ವದಲ್ಲಿ ನಿಯೋಗ ದೆಹಲಿಗೆ ತೆರಳಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ, ಪ್ರಲ್ಹಾದ್ ಜೋಶಿ ಅವರಿಗೆ ಸೋಮವಾರ ಸಂಜೆ ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ಹಾಗೂ ಚಿಕ್ಕೋಡಿ ಸಂಸದ ಅಣ್ಣಾಸಾಬ ಜೊಲ್ಲೆ ಅವರೊಂದಿಗೆ ಸಂಜೆ ಕೇಂದ್ರ ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ ಅವರನ್ನು ಭೇಟಿ ಮಾಡಿದ ಹೋರಾಟ ಸಮಿತಿ ಸದಸ್ಯರು, ಮಹತ್ವಪೂರ್ಣ ಯೋಜನೆ ನಿಧಾನಗತಿ ಸಾಗಿರುವ ಬಗ್ಗೆ ಗಮನಕ್ಕೆ ತಂದರು. ಯೋಜನೆಯ ಒಪ್ಪಂದದಂತೆ ರಾಜ್ಯ ಸರ್ಕಾರ ಈಗಾಗಲೇ ಅಗತ್ಯ ಭೂಮಿ ಹಾಗೂ ತನ್ನ ಪಾಲಿನ ಅನುದಾನವನ್ನು ನೀಡಿದ್ದು, ಕೂಡಲೇ ಬಾಕಿ ಉಳಿದಿರುವ ಕಾಮಗಾರಿಯನ್ನು ಆರಂಭಿಸಬೇಕು. ಲೋಕಾಪುರದಿಂದ ಕುಡಚಿವರೆಗೂ 100 ಕಿ.ಮೀ. ರೈಲು ಮಾರ್ಗ ನಿರ್ಮಾಣವನ್ನು ಏಕಕಾಲಕ್ಕೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು. ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ 2024ರಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ಸಚಿವರಿಗೆ ತಿಳಿಸಿದ್ದು, ಇದಕ್ಕೆ ಸಚಿವರು ಸಹ ಕಾಮಗಾರಿ ಪೂರ್ಣಗೊಳಿಸುವ ಅಭಯ ನೀಡಿದ್ದಾರೆ.

ಬಾಗಲಕೋಟೆ- ಕುಡಚಿ ಯೋಜನೆ ಅತ್ಯಂತ ಲಾಭದಾಯಕ ಯೋಜನೆ ಎನ್ನುವುದು ನನ್ನ ಗಮನಕ್ಕೆ ಇದ್ದು, 2024ರಲ್ಲಿ ಯೋಜನೆ ಮುಕ್ತಾಯಗೊಳಿಸಲು ಪ್ರಯತ್ನಿಸುವುದಾಗಿ ರೈಲ್ವೆ ಸಚಿವರು ಭರವಸೆ ನೀಡಿದ್ದಾರೆಂದು ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ್ ಖಾಜಿ ತಿಳಿಸಿದ್ದಾರೆ. ಬಾಗಲಕೋಟೆಯಿಂದ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ್ ಖಾಜಿ, ಉಪಾಧ್ಯಕ್ಷ ಶ್ರೀನಿವಾಸ ಬಳ್ಳಾರಿ, ರಬಕವಿ-ಬನಹಟ್ಟಿಯ ಗಣಪತರಾವ್ ಹಜಾರೆ, ಡಾ.ರವಿ ಜಮಖಂಡಿ ಅವರು ದೆಹಲಿಗೆ ತೆರಳಿದ್ದರು.

2010ರಲ್ಲಿ ಆರಂಭವಾಗಿರುವ ಯೋಜನೆ: ಒಂದು ಶತಮಾನದ ಬೇಡಿಕೆಯಾಗಿದ್ದ ಬಾಗಲಕೋಟೆ ಕುಡಚಿ ಹೊಸ ರೈಲು ಮಾರ್ಗಕ್ಕೆ 2010ರಲ್ಲಿ ಕೇಂದ್ರ ಸರ್ಕಾರ ಕೊನೆಗೆ ಹಸಿರು ನಿಶಾನೆ ತೋರಿಸಿತ್ತು. ರಾಜ್ಯ ಸರ್ಕಾರ ಜಮೀನು ಒದಗಿಸುವಲ್ಲಿ ವಿಳಂಬ ಮಾಡಿತ್ತು. ಹೀಗಾಗಿ 2010ರಿಂದ ಈ ವರೆಗೂ 142 ಕಿ.ಮೀ. ಮಾರ್ಗದಲ್ಲಿ ಬರೀ 43 ಕಿ.ಮೀ. ಮಾತ್ರ ಆಗಿದ್ದು, ಇನ್ನೂ ನೂರು ಕಿ.ಮೀ. ರೈಲು ಮಾರ್ಗ ಆಗಬೇಕಿದೆ. ಇದೀಗ ರಾಜ್ಯ ಸರ್ಕಾರ ತನ್ನ ಪಾಲಿನ ಜಮೀನು ಒದಗಿಸಿದ್ದು, ಹೊಸದಾಗಿ 21 ಕಿ.ಮೀ. ಮಾರ್ಗ ನಿರ್ಮಾಣಕ್ಕೆ ಇಲಾಖೆ ಟೆಂಡರ್ ಕರೆದಿದೆ. ಆದರೆ, ಬಾಕಿ ಇರುವ ಒಂದು ನೂರು ಕಿ.ಮೀ. ಮಾರ್ಗವನ್ನು ಏಕಕಾಲಕ್ಕೆ ಟೆಂಡರ್ ಕರೆದು ಕಾಮಗಾರಿ ಆರಂಭಿಸುವಂತೆ ಸಚಿವರನ್ನು ಭೇಟಿ ಮಾಡಿದ ನಿಯೋಗ ಆಗ್ರಹಿಸಿದೆ. ಇಷ್ಟು ವರ್ಷ ರಾಜ್ಯ ಸರ್ಕಾರ ಜಮೀನು ನೀಡಿಲ್ಲ ಎನ್ನುವ ಕಾರಣ ಹೇಳುತ್ತಿದ್ದೀರಿ. ಆದರೆ, ಇದೀಗ ಜಮೀನು ಲಭ್ಯ ಇದ್ದು, ಏಕಕಾಲಕ್ಕೆ ಕಾಮಗಾರಿ ನಡೆಯಲಿ ಎಂದು ಒತ್ತಾಯಿಸಿದ್ದಾರೆ. ಯೋಜನೆ ವಿಳಂಬದ ಬಗ್ಗೆಯೂ ಬಾಗಲಕೋಟೆ ಹಾಗೂ ಚಿಕ್ಕೋಡಿ ಸಂಸದರು ಸಹ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ನಮ್ಮ ನಿಯೋಗಕ್ಕೆ ಪ್ರಲ್ಹಾದ್ ಜೋಶಿ ಅವರು ಉತ್ತಮ ಸ್ಪಂದನೆ ನೀಡಿದರು. ಇದೀಗ ಮೂವರು ಸೇರಿ ಸರ್ಕಾರದ ಮೇಲೆ ಮತ್ತಷ್ಟು ಒತ್ತಡ ಹೆಚ್ಚಿಸಿ ಏಕಕಾಲಕ್ಕೆ ನೂರು ಕಿ.ಮೀ. ಮಾರ್ಗ ನಿರ್ಮಾಣಕ್ಕೆ ಮುಂದಾಗುವಂತೆ ಮಾಡಬೇಕು ಎಂದು ಕುತುಬುದ್ದೀನ್ ಖಾಜಿ ತಿಳಿಸಿದ್ದಾರೆ.