ಜಿಲ್ಲೆ

ಸ್ಥಳೀಯ ಅಭ್ಯರ್ಥಿಗಳಿಗೆ ಅನ್ಯಾಯ ದೂರು

ಕಾರವಾರ: ಇಲ್ಲಿನ ಕದಂಬ ನೌಕಾನೆಲೆಯ ಪ್ರಾಯೋಗಿಕ ತರಬೇತಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಅನ್ಯಾಯ ಎಸಗಲಾಗಿದೆ ಎಂದು ಆರೋಪಿಸಿ ನೌಕಾನೆಲೆ ನಿರಾಶ್ರಿತರ ಗುತ್ತಿಗೆ ಕಾರ್ಮಿಕರ ಸಹಕಾರ ಸಂಘದಿಂದ ಬುಧವಾರ ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರಿಗೆ ದೂರು ನೀಡಲಾಯಿತು.

ನೌಕಾದಳದಲ್ಲಿ ಈ ಬಾರಿ ಅಪ್ರೆಂಟಿಸ್‌ಗೆ 123 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಅವರ ಪೈಕಿ 115 ಮಂದಿ ಆಂಧ್ರಪ್ರದೇಶ, ಬಿಹಾರ ಸೇರಿದಂತೆ ಹೊರ ರಾಜ್ಯದವರಿದ್ದಾರೆ. ಕೇವಲ 18 ಮಂದಿ ಸ್ಥಳೀಯರನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ಅಪ್ರೆಂಟಿಸ್ ಆಯ್ಕೆ ಪ್ರಕ್ರಿಯೆಯಲ್ಲಿ ಸ್ಥಳೀಯರಿಗೆ, ಅದರಲ್ಲಿಯೂ ನೌಕಾನೆಲೆ ಯೋಜನೆಯಡಿ ನಿರಾಶ್ರಿತ ಕುಟುಂಬಗಳ ಮಕ್ಕಳಿಗೆ ಆದ್ಯತೆ ನೀಡುವ ಭರವಸೆ ಈಡೇರಿಸದೆ ವಂಚಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಪ್ರೆಂಟಿಸ್‌ಗೆ ಅಭ್ಯರ್ಥಿಗಳ ಆಯ್ಕೆಗೆ ನಡೆದ ಪರೀಕ್ಷೆಯ ಉತ್ತರ ಪತ್ರಿಕೆಯ ಮೌಲ್ಯಮಾಪನ ಮಾಡಿದವರು ಆಂಧ್ರಪ್ರದೇಶದವರು ಎಂಬ ಮಾಹಿತಿ ಇದೆ. ಆ ರಾಜ್ಯದಿಂದ ಬಂದಿದ್ದ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳಿಗೆ ಅವರೇ ವಸತಿ ವ್ಯವಸ್ಥೆ ಕಲ್ಪಿಸಿದ್ದರು. ಆಯ್ಕೆ ಪ್ರಕ್ರಿಯೆಯಲ್ಲಿ ಸ್ವಜನ ಪಕ್ಷಪಾತ ಧೋರಣೆ ಮೆರೆದಿದ್ದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಅಪ್ರೆಂಟಿಸ್‌ಗೆ ನಿರಾಶ್ರಿತ ಕುಟುಂಬಗಳ ಮಕ್ಕಳಿಗೆ ಆದ್ಯತೆ ನೀಡಬೇಕು. ಪುನಃ ಅಪ್ರೆಂಟಿಸ್ ಆಯ್ಕೆ ಪರೀಕ್ಷೆ ನಡೆಸಬೇಕು ಎಂದೂ ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಉಮಾಕಾಂತ ಹರಿಕಂತ್ರ, ಇತರರು ಇದ್ದರು.