ಜಿಲ್ಲೆ

ಕರೊನಾ ಮಾರ್ಗಸೂಚಿ ಪಾಲಿಸದವರಿಗೆ ತಕ್ಕಪಾಠ ಕಲಿಸಲು ನಿರ್ಧಾರ ; ಪರಿಷತ್ ಸದಸ್ಯರ ವಿರುದ್ಧ ರಾಜ್ಯಪಾಲರಿಗೆ ದೂರು

ತುಮಕೂರು: ಮೇಲ್ಮನೆ ಮರ್ಯಾದೆ ಮಣ್ಣುಪಾಲು ಮಾಡಿದ್ದಲ್ಲದೆ ಕರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದ ವಿಧಾನ ಪರಿಷತ್ ಸದಸ್ಯರ ವಿರುದ್ಧ ರಾಜಭವನಕ್ಕೀಗ ದೂರು ಸಲ್ಲಿಕೆಯಾಗಿದೆ.

ಕಳೆದ ಮಂಗಳವಾರ ವಿಧಾನಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆಗೆ ಸಂಬಂಧಿಸಿದಂತೆ ಆಡಳಿತ ಹಾಗೂ ವಿಪಕ್ಷಗಳ ಸದಸ್ಯರು ಪರಸ್ಪರ ಕೈಕೈ ಮಿಲಾಯಿಸಿ, ಎಳೆದಾಡಿದ್ದು ರಾಜ್ಯದ ಇತಿಹಾಸದಲ್ಲೇ ಕರಾಳ ಅಧ್ಯಾಯ ಎನಿಸಿದೆ. ಈ ಸಂವಿಧಾನ ಬಿಕ್ಕಟ್ಟಿನ ವಿಚಾರ ರಾಜಭವನ ಮೆಟ್ಟಿಲೇರಿರುವ ಸಂದರ್ಭದಲ್ಲೇ ರಾಜ್ಯದ ಮಾನ ಮೂರಾಬಟ್ಟೆ ಮಾಡಿದ ಪರಿಷತ್ ಸದಸ್ಯರಿಗೆ ತಕ್ಕ ಪಾಠ ಕಲಿಸಲು ತುಮಕೂರು ತಾಲೂಕು ಊರ್ಡಿಗೆರೆ ಹೋಬಳಿ ಕದರನಹಳ್ಳಿ ತಾಂಡಾ ನಿವಾಸಿ, ಹೈಕೋರ್ಟ್ ವಕೀಲ ಎಲ್.ರಮೇಶ್ ನಾಯ್ಕ ಮುಂದಾಗಿದ್ದಾರೆ.

ಡಿ.15ರಂದು ವಿಧಾನಪರಿಷತ್ ಕಲಾಪ ವೇಳೆ ಮೇಲ್ಮನೆ ಸದಸ್ಯರು ನಡೆದುಕೊಂಡ ರೀತಿಯನ್ನು ಇಡೀ ರಾಜ್ಯ, ರಾಷ್ಟ್ರ ಗಮನಿಸಿದೆ. ಈ ಘಟನೆಯಿಂದ ನಮ್ಮ ಶಾಸಕಾಂಗ ವ್ಯವಸ್ಥೆಯೇ ತಲೆತಗ್ಗಿಸುವಂತಾಗಿದೆ. ಮೇಲ್ಮನೆಯ ಘನತೆ ಮಣ್ಣುಪಾಲು ಮಾಡಿದ ಜತೆಗೆ ಕರೊನಾ ಮಾರ್ಗಸೂಚಿಗಳನ್ನು ಈ ವೇಳೆ ಪರಿಷತ್ ಸದಸ್ಯರು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂದು ರಾಜ್ಯಪಾಲರಿಗೆ ಇ-ಮೇಲ್ ಮೂಲಕ ರಮೇಶ್ ನಾಯ್ಕ ದೂರು ಸಲ್ಲಿಸಿದ್ದಾರೆ. ಪರಿಷತ್ ಸದಸ್ಯರಿಗೆ ಕರೊನಾ ಮಾರ್ಗಸೂಚಿ ಪಾಲಿಸುವಂತೆ ಮತ್ತು ಘನತೆಯಿಂದ ನಡೆದುಕೊಳ್ಳುವಂತೆ ನಿರ್ದೇಶನ ನೀಡುವಂತೆ ರಾಜ್ಯಪಾಲರಲ್ಲಿ ಮನವಿ ಮಾಡಿದ್ದಾರೆ.

ಡಿ.15ರಂದು ವಿಧಾನ ಪರಿಷತ್ ಕಲಾಪದಲ್ಲಿ ಭಾಗವಹಿಸಿದ್ದ ಸದಸ್ಯರು ಕರೊನಾ ಮಾರ್ಗಸೂಚಿಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ಮಾಸ್ಕ್ ಆಗಲಿ, ಪರಸ್ಪರ ಅಂತರವಾಗಲಿ ಕಾಪಾಡಿಲ್ಲ. ಯಾವ ನೈತಿಕತೆ ಇಟ್ಟುಕೊಂಡು ಈಗ ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಹೊರಡಿಸಲಾಗಿದೆ. ಈ ನಿಟ್ಟಿನಲ್ಲಿ ಪರಿಷತ್ ಸದಸ್ಯರಿಗೆ ರಾಜ್ಯಪಾಲರೇ ಎಚ್ಚರಿಕೆ ನೀಡಬೇಕಿದೆ. ಎಲ್.ರಮೇಶ್ ನಾಯ್ಕ ಹೈಕೋರ್ಟ್ ವಕೀಲ