ಜಿಲ್ಲೆ

ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ, ಲೋಕಾಗೆ ದೂರು

ಬೆಂಗಳೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಸೈಟ್ ಪಡೆದುಕೊಂಡಿದ್ದ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಮತ್ತೊಂದು ದೂರು ಗುರುವಾರ ದಾಖಲಾಗಿದೆ. ಇದೇ ವಿಷಯವಾಗಿ ರಾಜ್ಯಪಾಲರಿಗೂ ದೂರು ಸಲ್ಲಿಸಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬೇಕು ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಮನವಿ ಮಾಡಿದ್ದಾರೆ.

ಈ ಸಂಬಂಧ ಪ್ರಕರಣಕ್ಕೆ ಸಂಬಂಧಿಸಿ ಲೋಕಾಯುಕ್ತ ಐಜಿಪಿ ಸುಬ್ರಹ್ಮಣ್ಯೇಶ್ವರ ರಾವ್ ಅವರನ್ನು ಭೇಟಿಯಾಗಿ ಸಾಕ್ಷಾಧಾರ ಸಹಿತ ದೂರು ಸಲ್ಲಿಸಲಾಗಿದೆ. ಸಿಎಂ ತಮ್ಮ ಆಪ್ತರೊಂದಿಗೆ ಸೇರಿ ಹಗರಣ ಸೃಷ್ಟಿಸಿರುವ ಕಾರಣ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಎನ್.ಆರ್.ರಮೇಶ್ ಒತ್ತಾಯಿಸಿದ್ದಾರೆ.

ಸಿದ್ದರಾಮಯ್ಯ ಅವರಿಗೆ ವಿಜಯನಗರ 2ನೇ ಬಡಾವಣೆ ನಿರ್ಮಾಣಕ್ಕೆಂದು ಸ್ವಾಧೀನಪಡಿಸಿಕೊಂಡಿದ್ದ ಸ.ನಂ.70/4ಎ ಜಮೀನಿನಲ್ಲಿ 80/120 ಚದರ ಅಡಿ ವಿಸ್ತೀರ್ಣದ ಹಲವು ಸೈಟ್‌ಗಳನ್ನು ರಚಿಸಲಾಗಿತ್ತು. ಇದರಲ್ಲಿ 3161ನೇ ಸಂಖ್ಯೆಯ ನಿವೇಶನವನ್ನು ಸುಂದರರಾಜ್ ಎಂಬುವವರಿಗೆ ಹಂಚಿಕೆ ಮಾಡಲಾಗಿತ್ತು. ಬಳಿಕ ಆ ವ್ಯಕ್ತಿ ಮುಡಾದಿಂದ ನಕ್ಷೆ ಮಂಜೂರಾತಿ ಪಡೆದು ಮನೆ ನಿರ್ಮಿಸಿಕೊಂಡಿದ್ದರು. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪರಿಹಾರಧನ ಪಡೆದಿದ್ದ ಸಾಕಮ್ಮ ಅವರಿಂದ 1997ರ ನ.26ರಂದು ಸಿದ್ದರಾಮಯ್ಯರವರು ಕ್ರಯಕ್ಕೆ ಪಡೆದು ನೋಂದಣಿ ಮಾಡಿಸಿಕೊಂಡಿದ್ದರು. ಆಗ ಅವರು ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅದಾಗಲೇ ಜಮೀನನ್ನು ಭೂಸ್ವಾಧೀನ ಪಡಿಸಿಕೊಂಡು ಲೇಔಟ್ ನಿರ್ಮಿಸಿ ಸೈಟ್‌ಗಳನ್ನು ಮುಡಾದಿಂದ ಅರ್ಜಿದಾರರಿಗೆ ಹಂಚಿಕೆಯಾಗಿ 12 ವರ್ಷವೇ ಕಳೆದಿತ್ತು. ಈ ಸೈಟ್ ಖರೀದಿ ಮುನ್ನ 20 ದಿನ ಮುನ್ನ ಮುಡಾ ಅಧ್ಯಕ್ಷ ಸಿ.ಬಸವೇಗೌಡ 1997ರ ಅ.23ರಂದು 70/4ಎ ಜಮೀನನ್ನು ಡಿನೋಟಿಫಿಕೇಷನ್‌ಗೆ ಆದೇಶಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಒಪ್ಪಿಗೆ ಪಡೆಯದೆ ಡಿನೋಟಿಫೈ:

ಡಿನೋಟಿಫಿಕೇಷನ್ ಸಂಬಂಧ 1995ರ ಡಿ.12ರಂದೇ ಆಗಿನ ಮುಡಾ ಆಯುಕ್ತರು ಡಿನೋಟಿಫೈಗೆ ಕಾನೂನಿನಲ್ಲಿ ಅವಕಾಶ ಇಲ್ಲವೆಂದು ಆದೇಶಿಸಿದ್ದರು. ಆದರೂ ಅಧ್ಯಕ್ಷ ಬಸವೇಗೌಡ ಸ್ವತ: ಡಿನೋಟಿಫೈ ಮಾಡಿ ಕಡತವನ್ನು ಸರ್ಕಾರಕ್ಕೆ ಕಳುಹಿಸಿ ಅನುಮೋದನೆ ಪಡೆಯಲಿಲ್ಲ. ಬದಲಾಗಿ ಮೂಲ ಸೈಟ್‌ದಾರ ಸುಂದರ್‌ರಾಜ್ ನಿರ್ಮಿಸಿದ್ದ ಮನೆಯನ್ನು ಕೆಡವಿಹಾಕಲಾಯಿತು. ಈ ರೀತಿ ವಾಮಮಾರ್ಗದಲ್ಲಿ ಮಾಡಿದ್ದ ಡಿನೋಟಿೈ ಜಮೀನಿನಲ್ಲಿ ಸೈಟ್ ಪಡೆದಿದ್ದ ಸಿದ್ದರಾಮಯ್ಯ ಅವರು 2003ರಸೆ.29ರಂದು ಒಂದು ಕೋಟಿ ರೂ.ಗೆ ಮಾರಾಟ ಮಾಡಿದರು ಎಂದು ಎನ್.ಆರ್.ರಮೇಶ್ ಆರೋಪಿಸಿದ್ದಾರೆ.

ಈ ಕೇಸ್ ಸಂಬಂಧಿಸಿ ಸಿಎಂ ಸಿದ್ಧರಾಮಯ್ಯ, ಮುಡಾ ಮಾಜಿ ಅಧ್ಯಕ್ಷ ಸಿ.ಬಸವೇಗೌಡ ಸೇರಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023ರ ಅಡಿಯಲ್ಲಿ ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ನಕಲಿ ದಾಖಲೆ ತಯಾರಿಕೆ, ವಂಚನೆ ಮತ್ತು ಸರ್ಕಾರಿ ಭೂ ಕಬಳಿಕೆಗೆ ಸಂಚು ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಲೋಕಾಯುಕ್ತಕ್ಕೆ ದಾಖಲೆ ಸಹಿತ ದೂರು ಸಲ್ಲಿಸಿರುವುದಾಗಿ ಎನ್.ಆರ್.ರಮೇಶ್ ತಿಳಿಸಿದ್ದಾರೆ.