ಜಿಲ್ಲೆ

ಧಾನ್ಯಲಕ್ಷ್ಮಿ ೀ ಕಾಫಿ ಕ್ಯೂರಿಂಗ್ ವರ್ಕ್ಸ್ ಮತ್ತು ಟ್ರೇಡರ್ಸ್‌ನ ಪಾಲುದಾರರ ವಿರುದ್ಧ ಡಿವೈಎಸ್‌ಪಿಗೆ ದೂರು

ವಿರಾಜಪೇಟೆ: ವಿರಾಜಪೇಟೆಯ ಮಗ್ಗುಲ ಗ್ರಾಮದಲ್ಲಿರುವ ಧಾನ್ಯಲಕ್ಷ್ಮೀ ಕಾಫಿ ಕ್ಯೂರಿಂಗ್ ವರ್ಕ್ಸ್ ಮತ್ತು ಟ್ರೇಡರ್ಸ್‌ನ ಪಾಲುದಾರರು ಸುಮಾರು 35 ಕಾಫಿ ಬೆಳೆಗಾರರಿಂದ ಕಾಫಿ ಖರೀದಿಸಿ ಹಣ ನೀಡದೆ 3 ಕೋಟಿ ರೂ.ಗೂ ಹೆಚ್ಚು ವಂಚಿಸಿದ್ದು ಈ ಸಂಬಂಧ ಡಿವೈಎಸ್‌ಪಿಗೆ ದೂರು ನೀಡಲಾಗಿದೆ ಎಂದು ವಂಚನೆಗೊಳಗಾದ ಕಾಫಿ ಬೆಳೆಗಾರರ ಪರವಾಗಿ ಸ್ಥಳೀಯರಾದ ನೆಲ್ಲಮಕ್ಕಡ ಪಿ.ಮುತ್ತಣ್ಣ ತಿಳಿಸಿದರು.

10 ವರ್ಷಗಳಿಂದ ಟ್ರೇಡರ್ಸ್‌ನವರು ಕಾಫಿ ಖರೀದಿಯ ವ್ಯವಹಾರ ಮಾಡುತ್ತಿದ್ದರು. ಈ ಸಂಸ್ಥೆಯಲ್ಲಿ ವಿ.ಎಂ.ಕೆಂಪಣ್ಣ, ಪತ್ನಿ ವಿ.ಕೆ.ಚಂದ್ರಿಕಾ, ಪುತ್ರ ವಿ.ಕೆ.ಗುರುಪ್ರಸಾದ್, ಐಚ್ಚೆಟ್ಟಿರ ರಾಯ್ ತಿಮ್ಮಯ್ಯ, ಪತ್ನಿ ಸವಿತಾ ತಿಮ್ಮಯ್ಯ ಪಾಲುದಾರರಾಗಿದ್ದು, 2000 ರಲ್ಲಿ ಪಾಲುದಾರರ ಸಂಸ್ಥೆಯನ್ನು ಕಾನೂನುಬದ್ಧವಾಗಿ ನೋಂದಣಿ ಮಾಡಿದ್ದಾರೆ. ಪಾಲುದಾರರ ಪರವಾಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿ.ಕೆ.ಗುರುಪ್ರಸಾದ್ ಕಾಫಿ ಖರೀದಿಸಿ ಕೆಲವರಿಗೆ ಚೆಕ್‌ಗಳನ್ನು ನೀಡಿದ್ದು ಎಲ್ಲ ಚೆಕ್‌ಗಳು ಬೌನ್ಸ್ ಆಗುತ್ತಿವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಕಳೆದ 4 ವರ್ಷಗಳಿಂದ ವಂಚನೆ ಮಾಡಲಾಗುತ್ತಿದೆ. ಅಲ್ಲದೆ ಕಾಫಿ ಖರೀದಿಸಿದ ಹಣವನ್ನು ಗುರುಪ್ರಸಾದ್ ಹಾಗೂ ಚಂದ್ರಿಕಾ ಬಳಿ ಕೇಳಿದರೆ ಹಾರಿಕೆ ಉತ್ತರ ನೀಡುತ್ತಾರೆ. ನ್ಯಾಯಾಲಯದ ಮೊರೆ ಹೋಗುವ ಮುನ್ನ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.

ಕಾಫಿ ಬೆಳೆಗಾರ ಮಾಳೇಟಿರ ಕಾಶಿ ಮಾತನಾಡಿ, ಬೆಳೆಗಾರರಿಂದ ಖರೀದಿಸಿದ ಕಾಫಿಯನ್ನು ಮಾರಾಟ ಮಾಡಿ ಬೆಂಗಳೂರಿನಲ್ಲಿ ಆಸ್ತಿ ಖರೀದಿಸಿರುವ ಬಗ್ಗೆ ಡಿವೈಎಸ್‌ಪಿ ಅವರ ಗಮನಕ್ಕೆ ತರಲಾಗಿದೆ ಎಂದರು.

ಡಿ.ವೈ.ಎಸ್.ಪಿ. ಭರವಸೆ: ಸಂಸ್ಥೆಯ ಮಂದಿ ಪಾಲುದಾರರ ಬಗ್ಗೆ ನಿಗಾ ಇರಿಸಲಾಗುವುದು. ಅಲ್ಲದೆ ಐವರ ವಿರುದ್ಧವೂ ವಂಚನೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ವಂಚನೆಗೊಳಗಾದ ಕಾಫಿ ಬೆಳೆಗಾರರ ನಿಯೋಗಕ್ಕೆ ಭರವಸೆ ನೀಡಿರುವುದಾಗಿ ಬೆಳೆಗಾರರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.