ಕೆ.ಆರ್.ಸಾಗರ: ಹೊಂಗಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಸೋಮವಾರ ಏರ್ಪಡಿಸಿದ್ದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಸದಸ್ಯರು ಸಂಘದಲ್ಲಿನ ಲೆಕ್ಕಪತ್ರ ನಿರ್ವಹಿಸಿದ್ದಕ್ಕೆ ಹಾಗೂ ಮಂಡ್ಯ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಸುಶ್ಮಿತಾ ಸಭೆಗೆ ಆಗಮಿಸಿಲ್ಲ ಎಂದು ಸದಸ್ಯರು ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡರು.
ಕೇವಲ 65 ಸಂಘದ ಷೇರುದಾರ ಸದಸ್ಯರು ಇದ್ದರೂ ಕಳೆದ 19 ವರ್ಷದಲ್ಲಿ ವಾರ್ಷಿಕ ಸಭೆಯನ್ನು ಬಹಿರಂಗವಾಗಿ ಇಲ್ಲಿಯವರೆಗೂ ನಡೆಸಿರಲಿಲ್ಲ, ಈ ಬಾರಿ ಗೆದ್ದ ನಿರ್ದೇಶಕರು ಸಭೆ ನಡೆಸುತ್ತಿದ್ದು, ಷೇರುದಾರರಿಗೆ ಒಂದು ವಾರದ ಹಿಂದೆ ಸಭೆ ಅಹ್ವಾನ ಪತ್ರಿಕೆ ನೀಡಬೇಕೆಂದು ನಿಯಮ ಇದ್ದರೂ ಈ ತಿಂಗಳ 25ರ ಒಳಗೆ ಸಭೆ ನಡೆಸಬೇಕಾದ ಹಿನ್ನೆಲೆಯಲ್ಲಿ ಒಂದೆರಡು ದಿನದ ಹಿಂದೆ ಆಹ್ವಾನ ಪತ್ರಿಕೆ ನೀಡಿದ್ದೀರಿ, ಸಭೆಯಲ್ಲಿ ವಾರ್ಷಿಕ ಖರ್ಚು-ವೆಚ್ಚದ ಪತ್ರ ನೀಡಿಲ್ಲ, ಸರ್ಕಾರದಿಂದ ಸಿಗುವ ಉಪಯೋಗಗಳು, ಯೋಜನೆಗಳ ಬಗ್ಗೆ ಷೇರುದಾರರಿಗೆ ನೀಡಿಲ್ಲ, 20 ವರ್ಷಗಳಿಂದ ಸಂಘಕ್ಕೆ ಲಕ್ಷಾಂತರ ರೂ. ಉಳಿತಾಯವಾಗಿದ್ದರು ಸ್ವಂತ ಡೇರಿ ಕಟ್ಟಡ ನಿರ್ಮಾಣಕ್ಕೆ ಆಸಕ್ತಿ ತೋರಿಲ್ಲ, ಮಾಹಿತಿ ಕೇಳಿದರೆ ನಮ್ಮಲ್ಲಿ ಲೆಕ್ಕ ಸರಿಯಾಗಿದೆ ಎಂದು ಉತ್ತರ ನೀಡುತ್ತಿರಿ, ಸ್ಥಳೀಯ ಮಾರಾಟದ ದಾಖಲೆ ಇಲ್ಲ, ಬೋನಸ್ ನೀಡಿಲ್ಲ ಎಂದು ಸಂಘದ ಕಾರ್ಯದರ್ಶಿ ಮೈನಾವತಿಯನ್ನು ಸಂಘದ ಇಂದಿರಮ್ಮ, ನಂದಿನಿ ಲೋಕೇಶ್, ಗಾಯತ್ರಿ ಸೇರಿದಂತೆ ಅನೇಕ ಸದಸ್ಯರು ತರಾಟೆ ತೆಗೆದುಕೊಂಡರು.
ಸಂಘದ ನಡಾವಳಿ, ಮಾಹಿತಿಯನ್ನು ದಾಖಲೆ ಮಾಡುತ್ತಿಲ್ಲ, ಇಲ್ಲಿ ಸದಸ್ಯರು ನೀಡಿರುವ ದೂರು, ಪ್ರಶ್ನೆಗಳ ಬಗ್ಗೆ ಮಾಹಿತಿ ಪಡೆಯಲು ಹಾಲು ಒಕ್ಕೂಟದ ಸಿಬ್ಬಂದಿ ಇಲ್ಲದಿರುವ ಬಗ್ಗೆ ಆಕ್ರೋಶ ವ್ಯಕ್ತವಾಯಿತು.
ಸಭೆಗೆ ಮಂಡ್ಯ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಸುಶ್ಮಿತಾ ಗೈರು ಹಾಜರಾಗಿದ್ದು, ಯಾವುದೇ ಮುನ್ಸೂಚನೆ ನೀಡಿದೆ ಸಭೆಯ ನಡಾವಳಿ ಉಲ್ಲಂಘನೆ ಮಾಡಿರುವುದು ಸರಿಯಲ್ಲ ಎಂದು ಸಂಘದ ಷೇರುದಾರರೂ ಹಾಗೂ ಗ್ರಾಪಂ ಸದಸ್ಯೆ ಮಹಾಲಕ್ಷ್ಮೀ ಆಕ್ರೋಶ ವ್ಯಕ್ತಪಡಿಸಿದರು.
ಹೊಂಗಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಭೆಯ ಅಧ್ಯಕ್ಷತೆ ಹಾಗೂ ದೀಪ ಹಚ್ಚುವ ಮೂಲಕ ಸಂಘದ ಅಧ್ಯಕ್ಷ ಮಂಜುಳಾ ಚಾಲನೆ ನೀಡಿದರು. ಸಭೆಯಲ್ಲಿ ಪಶು ವೈದ್ಯಾಧಿಕಾರಿ ಡಾ.ರಘುಪತಿ, ಪಶುಗಳ ಆರೈಕೆ ಹಾಗೂ ಆರೋಗ್ಯದ ಬಗ್ಗೆ ಕೆಲವು ಸಲಹೆ ನೀಡಿದರು.
ಡೇರಿಗೆ ಹೆಚ್ಚಿನ ಹಾಲು ಪೂರೈಸಿದ ಾಗೂ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಮೈನಾವತಿ, ಉಪಾಧ್ಯಕ್ಷೆ ಆಶಾ, ಸಂಘದ ನಿರ್ದೇಶಕರು, ಷೇರುದಾರರು ಉಪಸ್ಥಿತರಿದ್ದರು.