ಜಿಲ್ಲೆ

ಸಂಸದ ಅನಂತ್‌ಕುಮಾರ್ ಹೆಗಡೆ ವಿರುದ್ಧ ಮೈಸೂರಿನಲ್ಲಿ ದೂರು ಸಲ್ಲಿಕೆ

ಅವಿನಾಶ್ ಜೈನಹಳ್ಳಿ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಏಕವಚನದಲ್ಲಿ ಮಾತಾಡಿದ ಸಂಸದ ಅನಂತ್‌ಕುಮಾರ್ ಹೆಗಡೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಾಂಗ್ರೆಸ್ ಮುಖಂಡರು ದೂರು ನೀಡಲಾಗಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರ ಎಂ.ಲಕ್ಷ್ಮಣ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ ನೇತೃತ್ವದ ನಿಯೋಗ ಭಾನುವಾರ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದರು.

ಹಿಂದು ಸಮಾಜವನ್ನು ಜಾತಿ, ಧರ್ಮ, ಭಾಷೆಯ ಹೆಸರಿನಲ್ಲಿ ಮುರುಕುರಾಮಯ್ಯ ಅಂಥವರು ಒಡೆಯುತ್ತಿದ್ದಾರೆ ಎಂದು ಆಧಾರರಹಿತ ಆರೋಪ ಮಾಡಿರುವುದಲ್ಲದೆ, ನಮ ವಿರೋಧಿ ಸಿದ್ದರಾಮಯ್ಯ ಹೊರತು ಕಾಂಗ್ರೆಸ್ ಅಲ್ಲ. ಅಲ್ಪಸಂಖ್ಯಾತರ ಮತಗಳಿಗಾಗಿ ಗತಿಗೆಟ್ಟ ಮಾನಸಿಕತೆಗೆ ನಮ ವಿರೋಧವಿದೆ. ಇದಲ್ಲದೆ ಭಟ್ಕಳದ ಚಿನ್ನದಪಳ್ಳಿ ಮಸೀದಿ ಧ್ವಂಸ ಮಾಡುವುದಾಗಿ ಹೇಳಿದ್ದಾರೆ.

ಅನಂತಕುಮಾರ್ ಹೆಗಡೆಯವರು ಸಿದ್ದರಾಮಯ್ಯ ನೀ ಬರ್ಲಿ ಬಿಡ್ಲಿ ರಾಮಜನಭೂಮಿ ನಿಲ್ಲಲ್ಲ ಮಗನೇ ಎಂದು ನಿಂದಿಸಿದ್ದಾರೆ. ಇವರು ನಿರಂತರವಾಗಿ ಸಿದ್ದರಾಮಯ್ಯ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುತ್ತಾರೆ. ಈಗ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ರಾಜ್ಯದಲ್ಲಿ ಕೋಮು ಸಂಘರ್ಷಕ್ಕೆ ಪ್ರಚೋದಿಸುತ್ತಿದ್ದಾರೆ. ಈ ಹಿಂದೆ ಬಿಜೆಪಿ ಬಂದಿರುವದೇ ದೇಶದಲ್ಲಿ ಸಂವಿಧಾನ ಬದಲಾಯಿಸಲು ಎಂದು ಹೇಳಿದ್ದರು. ಕೂಡಲೇ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಚುನಾವಣೆ ಮುಗಿಯುವ ತನಕ ಅವರನ್ನು ಬಂಧಿಸಬೇಕು ಎಂದು ದೂರಿನಲ್ಲಿ ವಿನಂತಿಸಿದ್ದಾರೆ.