ಮಂಗಳೂರು: ನಂಬಿಕೆಯಿಂದ ಸ್ನೇಹಿತನಿಗೆ ನೀಡಿದ ಬ್ಯಾಂಕ್ ಖಾತೆಯನ್ನು ಸೈಬರ್ ವಂಚನೆಯ ಹಣ ವರ್ಗಾವಣೆಗೆ ಬಳಕೆ ಮಾಡಿ, ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಖಾತೆ ದುರ್ಬಳಕೆ ಮಾಡಿದ ಆರೋಪಿ ಸುರತ್ಕಲ್ ಕೃಷ್ಣಾಪುರದ 7ನೇ ಬ್ಲಾಕ್ ನಿವಾಸಿ ಮೊಹಮ್ಮದ್ ಹಮ್ರಾಜ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಯುವಕನೊಬ್ಬ ಸೆನ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರುದಾರ ಯುವಕ 2022ರಲ್ಲಿ ಬಲ್ಮಠದಲ್ಲಿ ಐಟಿಐ ಕಲಿಯುತ್ತಿದ್ದಾಗ ಸ್ನೇಹಿತನೊಬ್ಬನ ಪರಿಚಯವಾಗಿದೆ. 2023ರಲ್ಲಿ ಅಕ್ಟೋಬರ್ ನಲ್ಲಿ ಆತ ಮೊಹಮ್ಮದ್ ಹಮ್ರಾಜ್ ಮತ್ತು ಮೊಹಮ್ಮದ್ ನಿಜಾಮುದ್ದೀನ್ ನನ್ನು ಕರೆದುಕೊಂಡು ಬಂದು ಪರಿಚಯಿಸಿದ್ದಾನೆ.
ಅವರಲ್ಲಿ ಮೊಹಮ್ಮದ್ ಹಮ್ರಾಜ್ ಗೆ ವಿದೇಶದಿಂದ ಹಣ ಬರಲಿದ್ದು, ಆ ಹಣ ವರ್ಗಾವಣೆ ಮಾಡಲು ಒಂದು ಬ್ಯಾಂಕ್ ಖಾತೆ ಬೇಕು ಎಂದು ದೂರುದಾರರಲ್ಲಿ ತಿಳಿಸಿದ್ದಾನೆ. ಆತನ ಮೇಲಿನ ನಂಬಿಕೆಯಿಂದ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ತನ್ನ ಕೆವೈಸಿ ದಾಖಲಾತಿಗಳನ್ನು ನೀಡಿ ಬ್ಯಾಂಕ್ ನಲ್ಲಿ ಖಾತೆ ತೆರೆದು ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿ ಬ್ಯಾಂಕ್ ಪಾಸ್ ಬುಕ್, ಸಹಿ ಮಾಡಿರುವ ಚೆಕ್ ಬುಕ್ ಮತ್ತು ಎ.ಟಿ.ಎಂ ಮತ್ತು ಸಿಮ್ ನ್ನು ಮೊಹಮ್ಮದ್ ಹಮ್ರಾಜ್ ಗೆ ನೀಡಿದ್ದರು. ಪ್ರತಿಯಾಗಿ ಹಮ್ರಾಜ್ 2,000 ರೂ. ನೀಡಿದ್ದ. ಬಳಿಕ ಆತನೊಂದಿಗೆ ಸಂಪರ್ಕ ಇರಲಿಲ್ಲ.
ಇತ್ತೀಚೆಗೆ ಆ ಬ್ಯಾಂಕ್ ಖಾತೆಯ ಮೇಲೆ ಆನ್ ಲೈನ್ ವಂಚನೆ ದೂರುಗಳು ದಾಖಲಾಗಿರುವ ಬಗ್ಗೆ ತಿಳಿದು ಬಂದಿದೆ. ಆ ಬಗ್ಗೆ ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಬ್ಯಾಂಕ್ ಖಾತೆಯಲ್ಲಿ ಸೈಬರ್ ವಂಚನೆಯ ಹಣವನ್ನು ವರ್ಗಾವಣೆ ಮಾಡಿ, ಬಳಿಕ ಚೆಕ್ ಮೂಲಕ ವಿತ್ ಡ್ರಾ ಮಾಡಲಾಗಿದೆ. ಖಾತೆಯ ಮೇಲೆ ವಿವಿಧ ರಾಜ್ಯದ ಪೊಲೀಸ್ ಠಾಣೆಗಳಲ್ಲಿ ದೂರು ಗಳು ದಾಖಲಾಗಿದೆ. ಖಾತೆಯನ್ನು ಪ್ರೀಜ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಖಾತೆಯನ್ನು ವಂಚನೆಗೆ ಬಳಸಿದ ಮೊಹಮ್ಮದ್ ಹಮ್ರಾಜ್ ಹಾಗೂ ಅದರಲ್ಲಿ ಭಾಗಿಯಾಗಿರುವ ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.