ಜಿಲ್ಲೆ

ದ್ವೇಷ ಭಾಷಣ, ತಿಮರೋಡಿ ವಿರುದ್ಧ ದೂರು ದಾಖಲು

ಉಡುಪಿ ಎಸ್ಪಿ ಹರಿರಾಂ ಶಂಕರ ಮಾಹಿತಿ

ಬಿಜೆಪಿಯ ಬಿ.ಎಲ್​. ಸಂತೋಷಗೆ ನಿಂದನೆ ಹಿನ್ನೆಲೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಬಿಜೆಪಿ ಮುಖಂಡ ಹಾಗೂ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್​. ಸಂತೋಷ ಮತ್ತು ಇನ್ನಿತರರ ವಿರುದ್ಧ ದ್ವೇಷದ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಮಹೇಶ ಶೆಟ್ಟಿ ತಿಮರೋಡಿ ವಿರುದ್ಧ ಬ್ರಹ್ಮಾವರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿರುವುದಾಗಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹರಿರಾಂ ಶಂಕರ ಆಗಸ್ಟ್​ 19ರಂದು ಮಾಹಿತಿ ನೀಡಿದ್ದಾರೆ.

ಆರೋಪಿ ಮಹೇಶ ಶೆಟ್ಟಿ ತಿಮರೋಡಿ ಆ.16ರಂದು ಫೇಸ್​ಬುಕ್​ ಪೇಜ್​ನಲ್ಲಿ ಬಿಜೆಪಿಯ ಬಿ.ಎಲ್​. ಸಂತೋಷ ಅವರ ಕುರಿತಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ತೇಜೋವಧೆ ಮಾಡಿರುವುದಾಗಿ ಉಡುಪಿ ಗ್ರಾಮಾಂತರ ಬಿಜಿಪಿಯ ಮಂಡಲಾಧ್ಯಕ್ಷ ರಾಜೀವ ಕುಲಾಲ್​ ಎಂಬವರು ದೂರು ದಾಖಲಿಸಿದ್ದಾರೆ.

ಹಿಂದು ಧರ್ಮದ ನಾಯಕನನ್ನು ಅವಹೇಳನ ಮಾಡಿ, ಬೇರೆ ಧರ್ಮಗಳ ಹಾಗೂ ಸಮುದಾಯದ ನಡುವೆ ವೈಮನಸ್ಸಿನ ದ್ವೇಷ ಭಾವನೆ ಉಂಟು ಮಾಡಿದ್ದಾರೆ. ತಿಮರೋಡಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೀ ಪೋಸ್ಟ್​ ವಿರುದ್ಧವೂ ಪ್ರಕರಣ

ಶರತ್​ ಶೆಟ್ಟಿ.

ಕೋಟ ವಸಂತ ಗಿಳಿಯಾರ್​ ಎಂಬುವರ ಫೇಸ್​ಬುಕ್​ ಖಾತೆಯಲ್ಲಿ ಧರ್ಮಸ್ಥಳ ಕ್ಷೇತ್ರದ ಮ್ಯಾಪ್​ ಆಳವಡಿಸಿ ಅಲ್ಲಿರುವ ದೇವಸ್ಥಾನ ಮತ್ತು ಮಸೀದಿಗಳ ಬಗ್ಗೆ ಪೋಸ್ಟ್​ ಹಾಕಿದ್ದರು. ಅದು ವಿಭಿನ್ನ ಧರ್ಮ, ಜಾತಿ ಹಾಗೂ ಸಮುದಾಯಗಳ ಮಧ್ಯೆ ಕೋಮು ಗಲಭೆ ಸೃಷ್ಟಿಸುವಂತಹ ಸಂಗತಿಯಾಗಿದೆ. ಅಲ್ಲದೆ, ಧಾರ್ಮಿಕ ಸಂಸ್ಥೆಗಳ ಮೇಲೆ ದಾಳಿಗೂ ಪ್ರಚೋದನೆ ನೀಡಿದ ಸಂದೇಶವಾಗಿದೆ. ಅದನ್ನು ಕೆಂಪು&ನೀಲಿ ಬಣ್ಣದಲ್ಲಿ ಗುರುತು ಮಾಡಿದ ನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದರು. ಹೀಗಾಗಿ ಅವರ ವಿರುದ್ಧ ಮಂಗಳೂರಿನ ಬೆಳ್ತಂಗಡಿ ಪೊಲೀಸ್​ ಠಾಣೆಯಲ್ಲಿ ಆ.9ರಂದು ಪ್ರಕರಣ ದಾಖಲಾಗಿರುತ್ತದೆ. ಅದೇಫೇಸ್​ಬುಕ್​ ಪೋಸ್ಟ್​ಅನ್ನು ಕೋಟ ತಾಲೂಕಿನ ಶರತ್​ ಶೆಟ್ಟಿ ವಡ್ಡರ್ಸೆ ಎಂಬವರು ರೀ ಪೋಸ್ಟ್ ಮಾಡಿದ್ದಾರೆ. ಅವರ ವಿರುದ್ಧವೂ ಕೋಟ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ ತಿಳಿಸಿದ್ದಾರೆ.