ಜಿಲ್ಲೆ

ಕಿರುಕುಳ ಆರೋಪ ನಾಲ್ವರ ವಿರುದ್ಧ ದೂರು

ಆರ್.ಕೃಷ್ಣ

ಮೈಸೂರು: ನಗರದ ಅಶೋಕಪುರಂನಲ್ಲಿರುವ ಕೇಂದ್ರಿಯ ರೈಲ್ವೆ ವರ್ಕ್‌ಶಾಪ್‌ನಲ್ಲಿ ನನ್ನ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆ ಸೇರಿದಂತೆ ನಾಲ್ವರು ಹಿರಿಯ ಅಧಿಕಾರಿಗಳ ವಿರುದ್ಧ ಮಹಿಳಾ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ.

ವರ್ಕ್‌ಶಾಪ್‌ನಲ್ಲಿ ಟೆಕ್ನಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆ ನೀಡಿದ ದೂರಿನ ಮೇರೆಗೆ ಸೀನಿಯರ್ ಸೆಕ್ಷನ್ ಇಂಜಿನಿಯರ್ ಜೆಡ್ ಥಾಮಸ್, ಸೀನಿಯರ್ ಸೆಕ್ಷನ್ ಇಂಜಿನಿಯರ್ ಗೀತೇಶ್ ಸಿಂಗ್, ಸೀನಿಯರ್ ಸೆಕ್ಷನ್ ಇಂಜಿನಿಯರ್ ಸುಜಿತ್ ಮತ್ತು ಮಹಿಳಾ ಅಧಿಕಾರಿ ಪ್ರತಿಭಾ ಚೌಹಾಣ್ ವಿರುದ್ಧ್ದ ಅಶೋಕ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಲಸ ಮಾಡುವ ವೇಳೆ ಜೆಡ್ ಥಾಮಸ್ ನನ್ನ ಮುಂದೆ ಲೈಂಗಿಕವಾಗಿ ಮಾತನಾಡುವುದು, ಲೈಂಗಿಕ ಚಿತ್ರ ಬಿಡಿಸಿ ತೋರಿಸುವುದು, ಕೈಯಲ್ಲಿ ಕೆಟ್ಟದಾಗಿ ಸನ್ನೆ ಮಾಡಿ ಮಾನಸಿಕವಾಗಿ ಹಿಂಸೆ ನೀಡಿದ್ದರು ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಇಲಾಖೆಯ ಆಂತರಿಕ ಸಮಿತಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜೆಡ್ ಥಾಮಸ್ ಬೇರೆ ವಿಭಾಗಕ್ಕೆ ವರ್ಗಾವಣೆ ಆದನಂತರ ಗೀತೇಶ್ ಸಿಂಗ್ ಹಾಗೂ ಸುಜಿತ್ ಅವರು ಕಿರುಕುಳ ಮುಂದುವರಿಸಿದ್ದು, ನಾನು ಕೆಲಸ ಮಾಡುವಾಗ ಫೋಟೋ ಹಾಗೂ ವಿಡಿಯೋ ತೆಗೆದಿದ್ದು, ಇದಕ್ಕೆ ಸೀನಿಯರ್ ಸೆಕ್ಷನ್ ಇಂಜಿನಿಯರ್ ಪ್ರತಿಭಾ ಚೌಹಾಣ್ ಬೆಂಬಲ ನೀಡಿದ್ದಾರೆ ಎಂದು ದೂರಿದ್ದಾರೆ.

ಇದನ್ನು ಪ್ರಶ್ನಿಸಿದ್ದಕ್ಕೆ ಗೀತೇಶ್‌ಸಿಂಗ್, ಬಿಹಾರದಿಂದ ಹುಡುಗರನ್ನು ಕರೆಸಿ ಸಾಕ್ಷಿ ಇಲ್ಲದಂತೆ ಶೂಟ್ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.