ಕೆ.ಎಂ.ದೊಡ್ಡಿ: ಸೆಸ್ಕ್ ಇಲಾಖೆ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ತಮಗೆ ಇಷ್ಟ ಬಂದಂತೆ ವರ್ತಿಸುತ್ತಾರೆ. ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ನೀಡಲು ಲಂಚ ಕೇಳುತ್ತಾರೆ ಎಂದು ಸಾರ್ವಜನಿಕರು ಶಾಸಕ ಕದಲೂರು ಉದಯ್ ಬಳಿ ಅಳಲು ತೋಡಿಕೊಂಡರು.
ಇಲ್ಲಿನ ಶಾಸಕರ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ರೈತರು ಸೆಸ್ಕ್ ಇಂಜಿನಿಯರ್‌ಗಳ ನಿರ್ಲಕ್ಷ್ಯದ ಬಗ್ಗೆ ದೂರುಗಳ ಸುರಿಮಳೆಗೈದರು. ಸೆಸ್ಕ್ ಕಿರಿಯ ಇಂಜಿನಿಯರ್ ನಂದಕುಮಾರ್ ಮತ್ತು ಶಿವಕುಮಾರ್ ಅವರು ರೈತರನ್ನು ಕಚೇರಿಗೆ ಅಲೆಸುತ್ತಾರೆ. ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ವಿಚಾರವಾಗಿ ಹಣ ಕೊಟ್ಟರಷ್ಟೆ ಕೆಲಸ ಮಾಡುತ್ತಾರೆ. ಅಲ್ಲದೆ ಸಾರ್ವಜನಿಕರ ಜತೆ ದರ್ಪದಿಂದ ವರ್ತಿಸುತ್ತಾರೆ. ಇವರನ್ನು ವರ್ಗಾವಣೆ ಮಾಡಿ ಎಂದು ಶಾಸಕರ ಬಳಿ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕದಲೂರು ಉದಯ್, ಈ ಬಗ್ಗೆ ಮೇಲಧಿಕಾರಿಗಳ ಜತೆ ಚರ್ಚಿಸಿ ಅಗತ್ಯ ಕ್ರಮ ವಹಿಸುತ್ತೇನೆ. ರೈತರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾದರೆ ನಾನು ಸಹಿಸುವುದಿಲ್ಲ. ಸೆಸ್ಕ್ ಅಧಿಕಾರಿಗಳ ವಿರುದ್ಧ ಕ್ರಮವಹಿಸುತ್ತಾನೆ ಎಂದು ಭರವಸೆ ನೀಡಿದರು.
ರೈತರು ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹಲವು ಮನವಿಗಳನ್ನು ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಸಿದ ಶಾಸಕ, ಈ ಬಗ್ಗೆ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಸಮ್ಮುಖದಲ್ಲಿ ನಿಮ್ಮ ಸಮಸ್ಯೆಗಳನ್ನು ಇತ್ಯರ್ಥ ಮಾಡಿಕೊಡುವುದಾಗಿ ಭರವಸೆ ನೀಡಿದರು. ಕಂದಾಯ ಮತ್ತು ತಾಲೂಕು ಕಚೇರಿಗೆ ಸಂಬಂಧಿಸಿದ ವಿಚಾರಗಳಿಗೆ ಕ್ಷೇತ್ರದ ಜನತೆ ಮದ್ದೂರು ತಾಲೂಕು ಕಚೇರಿಯಲ್ಲಿರುವ ಶಾಸಕ ಕಚೇರಿಗೆ ಬನ್ನಿ. ಅಲ್ಲಿ ಅಧಿಕಾರಿಗಳ ಸಮ್ಮುಖದಲ್ಲೆ ಸಮಸ್ಯೆ ಬಗೆಹರಿಸುತ್ತೇನೆ ಎಂದರು.
ಜಿಪಂ ಮಾಜಿ ಸದಸ್ಯ ಎ.ಎಸ್.ರಾಜೀವ್, ಮುಖಂಡರಾದ ಕೂಳಗೆರೆ ಜಯರಾಮು, ಮಡನೇಹಳ್ಳಿ ಸಿದ್ದಲಿಂಗ ಪ್ರಸಾದ್, ಶೆಟ್ಟಹಳ್ಳಿ ರಘು ಬೋರೇಗೌಡ, ಕರಡಕೆರೆ ಮನು, ಅಣ್ಣೂರು ಹರೀಶ್ ಮತ್ತಿತರರಿದ್ದರು.