ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಕುಣಿತ ಭಜನೆ ಮಾಡುವ ಹೆಣ್ಣು ಮಕ್ಕಳ ವಿರುದ್ಧ ಅವಾಚ್ಯ ಪದಗಳಿಂದ ನಿಂದಿಸಿದ್ದ ಪುತ್ತೂರು ವಲಯ ಕಾಣಿಯೂರು ಅರಣ್ಯಾಧಿಕಾರಿ ಸಂಜೀವ ಕಾಣಿಯೂರು ವಿರುದ್ಧ ಭಜಕರು ಆಕ್ರೋಶ ವ್ಯಕ್ತಪಡಿಸಿ, ಅಧಿಕಾರಿಯನ್ನು ವೃತ್ತಿಯಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಮೂಡುಬಿದಿರೆ ಪೊಲೀಸ್ ಠಾಣೆಗೆ ಭಜನಾ ಕಾರ್ಯಕರ್ತರು ದೂರು ನೀಡಿದ್ದಾರೆ.
ಮಹಿಳೆಯರಮತ್ತು ಕುಣಿತ ಭಜನೆ ಮಾಡುವ ಮಕ್ಕಳ ಬಗ್ಗೆ ನಿಂದನಾತ್ಮಕವಾಗಿ ಮಾತನಾಡಿದ ಅರಣ್ಯಾಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಆತನ ಮಾತುಗಳಿಂದ ಸಂಸ್ಕೃತಭರಿತವಾದ ಭಜನೆಯ ಭಜಕರಿಗೆ ನೋವಾಗಿದೆ. ಇದು ಹಿಂದು ಸಮಾಜಕ್ಕೆ ಆದ ನೋವು. ಭಜನೆ ಎನ್ನುವುದು ಭಗವಂತನನ್ನು ಒಲಿಸುವ ಸನ್ಮಾರ್ಗ. ಇಂತಹ ಮಾತುಗಳಿಂದ ಮುಂದಿನ ದಿನಗಳಲ್ಲಿ ಅಶಾಂತಿ ನಿರ್ಮಿಸುವ ಹುನ್ನಾರ ಅಡಗಿದೆ ಎಂದು ಮೂಡುಬಿದಿರೆ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಲಕ್ಷ್ಮಣ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವ ಹಿಂದು ಪರಿಷತ್ ಕಾರ್ಯದರ್ಶಿ ಸುಚೇತನ್ ಜೈನ್, ಹಿಂದು ಜಾಗರಣ ವೇದಿಕೆಯ ಮುಖಂಡ ಸಮಿತ್ ರಾಜ್ ದರಗುಡ್ಡೆ, ಬಜರಂಗದಳ ಸಂಘಟನೆಯ ಮುಖಂಡರಾದ ಪ್ರವೀಣ್ ಬೋರಗುಡ್ಡೆ, ಅವಿನಾಶ್, ಕುಣಿತ ಭಜನೆ ತರಬೇತುದಾರ ಅಶೋಕ್ ನಾಯಕ್, ವಿಜಯ್ ನೀರ್ಕೆರೆ, ಲಕ್ಷ್ಮಣ್‌ನಾಯ್ಕ, ಅಕ್ಷಯ್ ಸಾವ್ಯ, ಹಾಗೂ ಭಜನಾ ಪರಿಷತ್ತಿನ ವಲಯಾಧ್ಯಕ್ಷರ ಸಹಿತ ಅಸಂಖ್ಯ ಭಜನಾ ಕಾರ್ಯಕರ್ತರು, ಹಿಂದು ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.