ಜಿಲ್ಲೆ

ಅಮ್ಯೂಸ್ಮೆಂಟ್ ಪಾರ್ಕ್ ಯೋಜನೆ ವಿರುದ್ಧ ದೂರು: ಕೇಂದ್ರ ಅಣೆಕಟ್ಟೆ ಸುರಕ್ಷತಾ ಪ್ರಾಧಿಕಾರ ಹಾಗೂ ಕೇಂದ್ರ ಪರಿಸರ ಇಲಾಖೆಗೆ ಕಂಪ್ಲೆಂಟ್

ಕೆ.ಎನ್.ರಾಘವೇಂದ್ರ

ಮಂಡ್ಯ: ವಿಶ್ವವಿಖ್ಯಾತ ಕೃಷ್ಣರಾಜಸಾಗರ ಜಲಾಶಯದ ಬಳಿ ರಾಜ್ಯ ಸರ್ಕಾರ ನಿರ್ಮಿಸಲು ಹೊರಟಿರುವ ಅಮ್ಯೂಸ್‌ಮೆಂಟ್ ಪಾರ್ಕ್ ವಿರೋಧಿಸಿ ಕೇಂದ್ರ ಅಣೆಕಟ್ಟೆ ಸುರಕ್ಷತಾ ಪ್ರಾಧಿಕಾರ ಹಾಗೂ ಕೇಂದ್ರ ಪರಿಸರ ಇಲಾಖೆಗೆ ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಆನ್‌ಲೈನ್‌ನಲ್ಲಿ ದೂರು ಸಲ್ಲಿಸಿದ್ದಾರೆ.

ಕೆಆರ್‌ಎಸ್‌ನ ಬೃಂದಾವನ ಉದ್ಯಾನ ಮತ್ತು ತೋಟಗಾರಿಕೆ ಇಲಾಖೆಗೆ ಸೇರಿದ ಜಾಗ, ಅರಣ್ಯ ಪ್ರದೇಶ ಎಂದು 1978ರಲ್ಲಿ ನೋಟಿಫಿಕೇಷನ್ ಆಗಿದೆ. ಅಣೆಕಟ್ಟೆಗೆ ಒಂದು ಕಿ.ಮೀ ದೂರದಲ್ಲಿರುವ ದೇವರಾಜ ಪಕ್ಷಿಧಾಮದಲ್ಲಿ ನೀರು ನಾಯಿ ಮತ್ತು ವಲಸೆ ಪಕ್ಷಿಗಳಿವೆ. ಸುತ್ತಮುತ್ತಲ ಪ್ರದೇಶ ಜೀವ ವೈವಿಧ್ಯತೆಯಿಂದ ಕೂಡಿದೆ. ಸ್ಥಳೀಯರು ಮತ್ತು ರೈತರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಿಸಲು ಹೊರಟಿದೆ. ಇದರಿಂದ ಅಣೆಕಟ್ಟೆ ಮತ್ತು ಪರಿಸರಕ್ಕೆ ಹಾನಿಯಾಗುವ ಸಾಧ್ಯತೆಗಳಿವೆ ಎಂದು ಆರೋಪಿಸಿದ್ದಾರೆ.

ಅಣೆಕಟ್ಟೆ ಬಳಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣಕ್ಕಾಗಿ ಆಳವಾದ ದೊಡ್ಡ ಗುಂಡಿಗಳನ್ನು ತೋಡಿದರೆ, ಏಕ ಶಿಲಾಪದರದ ಮೇಲೆ ನಿಂತಿರುವ ಕೆ.ಆರ್.ಎಸ್ ಅಣೆಕಟ್ಟೆ ಕಂಪಿಸಿದರೆ ಅನಾಹುತವಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಣೆಕಟ್ಟು ಸುರಕ್ಷತಾ ಕಾಯ್ದೆಯ 2021ರ ಪ್ರಕಾರ ಅಣೆಕಟ್ಟೆಯ 20 ಕಿ.ಮೀ. ಸುತ್ತ ಯಾವುದೇ ಅಭಿವೃದ್ಧಿ ಚಟುವಟಿಕೆ ಹಮ್ಮಿಕೊಳ್ಳುವಂತಿಲ್ಲ. ಬೇರೆ ಯಾವುದೇ ನಿರ್ಮಾಣ ಕಾರ್ಯವನ್ನೂ ಮಾಡುವಂತಿಲ್ಲ. ಅಣೆಕಟ್ಟೆಯ ಸ್ವರೂಪವನ್ನು ಬದಲಿಸುವಂತಿಲ್ಲ. ಆದರೂ ಸರ್ಕಾರ ಈ ಯೋಜನೆ ಅನುಷ್ಠಾನಗೊಳಿಸಲು ಮುಂದಾಗಿದೆ ಎಂದು ದೂರಿದ್ದಾರೆ.

ಅಮ್ಯೂಸ್‌ಮೆಂಟ್ ಪಾರ್ಕ್‌ನ ಭಾಗವಾಗಿ ಹೆಲಿಪ್ಯಾಡ್, ವಾಹನ ನಿಲ್ದಾಣ, ಮನರಂಜನಾ ಉದ್ಯಾನ, ತೂಗು ಸೇತುವೆ, ವೀಕ್ಷಣಾ ಗೋಪುರ ಸೇರಿದಂತೆ ಒಟ್ಟು 41 ಕಾಮಗಾರಿಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಇವುಗಳಿಂದ ಅಣೆಕಟ್ಟೆಗೆ ಅಪಾಯ ಒದಗುವ ಸಂಭವವೇ ಹೆಚ್ಚಾಗಿದೆ ರಾಜ್ಯ ಸರ್ಕಾರ ದೇಶದೆಲ್ಲಡೆ ನಡೆದಿರುವ ಅಣೆಕಟ್ಟೆ ಕುಸಿತಗಳನ್ನು ಗಮನದಲ್ಲಿ ಇಟ್ಟುಕೊಂಡು, ಈ ಯೋಜನೆ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.