ಜಿಲ್ಲೆ

ಹಣ ಕೇಳಿದರೆ ವೈದ್ಯರಿಗೆ ದೂರು ನೀಡಿ

ಹೊಳೆನರಸೀಪುರ: ಪಟ್ಟಣದ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಸಾರ್ವಜನಿಕರಿಂದ ಹಣ ಕೇಳಿದರೆ ಮಾಹಿತಿ ನೀಡುವಂತೆ ವೈದ್ಯರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ನಾವು ಯಾರಲ್ಲೂ ಹಣ ಕೇಳುವುದಿಲ್ಲ. ನಮಗೆ ಕೊಡಬೇಕು ಎಂದು ಹೇಳಿ ನಮ್ಮ ಸಿಬ್ಬಂದಿಯಲ್ಲಿ ಕೆಲವರು ಹಣ ತೆಗೆದುಕೊಳ್ಳುತ್ತಿರಬಹುದು. ಇನ್ನು ಕೆಲವರು ಇವರು ನಮ್ಮ ಸಂಬಂಧಿ ಎಂದು ಆಸ್ಪತ್ರೆಗೆ ಕರೆದುಕೊಂಡು ಬರುವವರು ವೈದ್ಯರಿಗೆ ಕೊಡಬೇಕು ಎಂದು ಸುಳ್ಳು ಹೇಳಿ ಹಣ ತೆಗೆದುಕೊಂಡಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ಕೆಲವರು ನಮ್ಮ ಹೆಸರನ್ನು ದುರುಪಯೋಗ ಪಡೆಸಿಕೊಂಡು ಹಣ ಪಡೆಯುತ್ತಿರಬಹುದು. ಯಾರಾದರು ಹಣ ಕೇಳಿದರೆ ವೈದ್ಯರಿಗಾಗಲಿ ಅಥವಾ ಆಡಳಿತ ವೈದ್ಯಾಧಿಕಾರಿ ಅವರಿಗಾಗಲಿ ಮಾಹಿತಿ ನೀಡುವಂತೆ ಸ್ತ್ರೀರೋಗ ತಜ್ಞ ಡಾ.ಲೋಕೇಶ್, ಡಾ.ಬಾಲಕೃಷ್ಣ, ಡಾ.ಚಿಂತನಾ ಮನವಿ ಮಾಡಿದ್ದಾರೆ.

ಪಟ್ಟಣದ ತಾಯಿ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಸಾಮಾನ್ಯ ಹೆರಿಗೆ ಹಾಗೂ ಶಸ್ತ್ರ ಚಿಕಿತ್ಸೆ ಮಾಡಲು ಹಣ ನೀಡಲೇಬೇಕಾದ ಪರಿಸ್ಥಿತಿ ಇದೆ ಎಂದು ವ್ಯಾಪಕ ದೂರುಗಳು ಬಂದ ಹಿನ್ನೆಲೆಯನ್ನು ಶಾಸಕ ಎಚ್.ಡಿ.ರೇವಣ್ಣ ಸಭೆ ನಡೆಸಿದ್ದರು. ಆಸ್ಪತ್ರೆಯಲ್ಲಿ ಯಾರಾದರೂ ಹಣ ಕೇಳಿದರೆ ಅಥವಾ ರೋಗಿಗಳಿಗೆ ಸ್ಪಂದಿಸದಿದ್ದರೆ ಕೂಡಲೇ ನನ್ನ ಗಮನಕ್ಕೆ ತರಬೇಕು. ಆಸ್ಪತ್ರೆಯಲ್ಲಿ ಕೆಲವು ಗುತ್ತಿಗೆ ನೌಕರರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ದೂರುಗಳಿದ್ದು, ಅಂತಹವರನ್ನು ಕೆಲಸದಿಂದ ಕೈಬಿಡಲು ಸೂಚಿಸುತ್ತೇನೆ ಎಂದು ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಸಿಬ್ಬಂದಿಗೆ ಹಣ ನೀಡದಂತೆ ವೈದ್ಯರು ಮನವಿ ಮಾಡಿದ್ದಾರೆ.