ಜಿಲ್ಲೆ

ಸ್ಪರ್ಧಾತ್ಮಕ ಜಗತ್ತು ಎದುರಿಸಲು ಬೇಕು ನಿರಂತರ ಕಲಿಕೆ

ಹರ್ಷ ನ.ಪುರೋಹಿತ

ಹಿರಿಯೂರು: ಶಿಕ್ಷಕರು ತಮ್ಮ ವೃತ್ತಿ ಜವಾಬ್ದಾರಿ ಅರಿತು, ಜ್ಞಾನ ವಿಸ್ತರಣೆ ಕಡೆ ಚಿತ್ತ ಹರಿಸಬೇಕು ಎಂದು ಬಿಇಒ ಸಿ.ಎಂ.ತಿಪ್ಪೇಸ್ವಾಮಿ ಹೇಳಿದರು.

ನಗರದ ಎ.ಕೃಷ್ಣಪ್ಪ-ರೋಟರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕ ವೃತ್ತಿಗೆ ಶ್ರೇಷ್ಠ ಸ್ಥಾನವಿದೆ, ಗುಣಮಟ್ಟದ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಸ್ಪರ್ಧಾತ್ಮಕ ಯುಗದಲ್ಲಿ ಕಲಿಕೆ ನಿರಂತರವಾಗಿರಬೇಕು ಎಂದರು.

ಶಿಕ್ಷಕರು ವೃತ್ತಿಪರತೆಯ ಜತೆ ಹೊಸ ವಿಷಯಗಳನ್ನು ತಿಳಿದು, ಮಕ್ಕಳ ಮನಸ್ಥಿತಿ ಅರಿತು ಬೋಧಿಸಬೇಕು. ಒತ್ತಡದ ನಡುವೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ನಾವು ಏನನ್ನು ಕಲಿಯುತ್ತೇವೆಯೋ ಅದನ್ನು ಮಾತನಾಡುತ್ತೇವೆ. ವಿದ್ಯಾರ್ಥಿಗಳ ಮನಸ್ಸು ಅರಿಯುವ ಮೊದಲು ನಮ್ಮ ಮನಸ್ಸನ್ನು ತಿಳಿಯುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.

ಪದವೀಧರ ಪ್ರಾಥಮಿಕ ಶಿಕ್ಷಕರಿಗೆ ಮಾನಸಿಕ ಒತ್ತಡ ನಿರ್ವಹಣೆ, ಮಾನಸಿಕ ಆರೋಗ್ಯ ಕುರಿತು ಮಾಹಿತಿ ನೀಡಲಾಯಿತು.

ಬಿಆರ್‌ಸಿ ತಿಪ್ಪೇರುದ್ರಪ್ಪ, ಜಿಪಿಟಿ ಶಿಕ್ಷಕರ ಸಂಘದ ಅಧ್ಯಕ್ಷ ಸುಂದರ್ ರಾಜ್, ಪ್ರಧಾನ ಕಾರ್ಯದರ್ಶಿ ದೊರೆಸ್ವಾಮಿ, ಮಹೇಶ್, ರೋಟರಿ ಅಧ್ಯಕ್ಷ ಜಿ.ಎಸ್.ಕಿರಣ್, ಕಾರ್ಯದರ್ಶಿ ರಾಘವೇಂದ್ರಾಚಾರ್, ಶಿವಲಿಂಗಪ್ಪ, ಮಂಜುನಾಥ್, ಹನುಮಂತರೆಡ್ಡಿ ಇತರರಿದ್ದರು.