ತೇರದಾಳ: ಡಿಜಿಐನಂತಹ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಏರ್ಪಡಿಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ ಎಂದು ಸೀತಾರಾಮರಾವ್ ನಂದೂರಿ ಹೇಳಿದರು.
ಪಟ್ಟಣದ ದಾನಿಗೊಂಡ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಶಿಷ್ಯವೇತನ ಪರೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭವಿಷ್ಯತ್ತಿನಲ್ಲಿ ವಾಣಿಜ್ಯಶಾಸ ಮತ್ತು ವಿಜ್ಞಾನ ವಿಭಾಗಗಳು ಬದುಕಿಗೆ ಬಹುದೊಡ್ಡ ಕೊಡುಗೆಯಾಗಲಿದ್ದು, ವಿಪುಲ ಅವಕಾಶಗಳನ್ನು ಕಲ್ಪಿಸುತ್ತವೆ ಎಂದರು.
ವಿನಯ ಪಾಟೀಲ ಮಾತನಾಡಿ, ಸತತ ಪರಿಶ್ರಮ ಮತ್ತು ನಿರಂತರ ಅಧ್ಯಯನದ ಮೂಲಕ ಗುರಿ ಸಾಧಿಸಲು ಸಾಧ್ಯ. ಆದ್ದರಿಂದ ಪ್ರತಿ ವಿದ್ಯಾರ್ಥಿಯು ಹೆತ್ತವರ ಕನಸುಗಳನ್ನು ಸಾಕಾರಗೊಳಿಸಲು ಪ್ರಯತ್ನಿಸಬೇಕು ಎಂದರು.
ಸಂಸ್ಥೆಯ ಸಂಸ್ಥಾಪಕ ಚೇರ್ಮನ್ ಡಾ. ಮಹಾವೀರ ದಾನಿಗೊಂಡ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಭರವಸೆ ಮೂಡಿಸುವ ಕಾರ್ಯವನ್ನು ನಮ್ಮ ಸಂಸ್ಥೆ ಮಾಡುತ್ತಿದೆ ಎಂದರು.
ಡಾ. ಪುಷ್ಪದಂತ ದಾನಿಗೊಂಡ, ಪ್ರಾಚಾರ್ಯ ಡಾ. ವಾಸು ಮತ್ತಿತರರಿದ್ದರು.