ಜಿಲ್ಲೆ

ಸೆ.1ರಂದು ನಗರದಲ್ಲಿ ಕಂಡಕ್ಟರ್ ಹುದ್ದೆಗೆ ಪರೀಕ್ಷೆ: ಜಿಲ್ಲಾಧಿಕಾರಿ ಕಚೇರಿ ಸಹಾಯಕಿ ಡಾ.ರೋಹಿಣಿ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಬೆಂಗಳೂರು ಮಹಾನಗರ ಸಂಸ್ಥೆಯಲ್ಲಿ ಖಾಲಿ ಇರುವ ಕಂಡಕ್ಟರ್ ಹುದ್ದೆಗಳ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆ ಸೆ.1ರಂದು ನಡೆಯಲಿದೆ. ಅದರಂತೆ ಜಿಲ್ಲೆಯಲ್ಲಿ ಒಟ್ಟು 6 ಕೇಂದ್ರದಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದು, ಎಲ್ಲ ಪ್ರಕ್ರಿಯೆ ವ್ಯವಸ್ಥಿತವಾಗಿ ನಡೆಸಿ ಎಂದು ಜಿಲ್ಲಾಧಿಕಾರಿ ಕಚೇರಿ ಸಹಾಯಕಿ ಡಾ.ರೋಹಿಣಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಳಗ್ಗೆ 10.30 ರಿಂದ 12.30ರವರೆಗೆ ಪತ್ರಿಕೆ-1 ಹಾಗೂ ಮಧ್ಯಾಹ್ನ 2.30 ರಿಂದ 4.30 ರವರೆಗೆ ಪತ್ರಿಕೆ-2ರ ಪರೀಕ್ಷೆ ನಡೆಯಲಿವೆ. ಯಾವುದೇ ಲೋಪದೋಷ ನಡೆಯಬಾರದು ಎಂದರು.

ಪರೀಕ್ಷೆ ಆರಂಭವಾಗುವ 2 ಗಂಟೆ ಮುಂಚೆಯೇ ಅಭ್ಯರ್ಥಿಗಳು ಕೇಂದ್ರಕ್ಕೆ ಬಂದು ತಮ್ಮ ಆಸನ ಹುಡುಕಿ ಖಾತ್ರಿಪಡಿಸಿಕೊಳ್ಳಬೇಕು. ಕೊಠಡಿ ಮೇಲ್ವಿಚಾರಕರು ಅಭ್ಯರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಇರುವ ಸ್ಥಳದಲ್ಲಿ ಕುಳಿತಿರುವುದನ್ನು ಪರಿಶೀಲಿಸಬೇಕು. ಪರೀಕ್ಷಾ ಸಮಯದಲ್ಲಿ ನಿಶ್ಯಬ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ ಮೇಲ್ವಿಚಾರಕರು, ವೀಕ್ಷಕರು ಅನಗತ್ಯ ವಿಚಾರಗಳನ್ನು ಚರ್ಚಿಸಿ ಅಭ್ಯರ್ಥಿಗಳಿಗೆ ತೊಂದರೆ ಉಂಟುಮಾಡಿದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯ ಒಳಗೆ ಸ್ಮಾರ್ಟ್‌ವಾಚ್, ಮೊಬೈಲ್, ಇಯರ್ ಫೋನ್ ಮುಂತಾದ ಯಾವುದೇ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಜೀನ್ಸ್ ಪ್ಯಾಂಟ್, ತುಂಬು ತೋಳಿನ ಅಂಗಿ ಧರಿಸಿ ಬಂದವರಿಗೆ ಪರೀಕ್ಷಾ ಕೇಂದ್ರ ಕೊಠಡಿಗೆ ಪ್ರವೇಶ ನಿಷೇಧಿಸಲಾಗಿದೆ. ಮೇಲ್ವಿಚಾರಕರು ಅಭ್ಯರ್ಥಿಗಳ ರಿಜಿಸ್ಟರ್ ಸಂಖ್ಯೆ, ಸಹಿ ಮುಂತಾದ ಅಂಶಗಳನ್ನು ಪರಿಶೀಲಿಸಬೇಕು. ಒಂದು ಬಾರಿ ಕೊಠಡಿಗೆ ಪ್ರವೇಶಿಸಿದ ನಂತರ ಪರೀಕ್ಷೆ ಮುಗಿಯುವವರೆಗೂ ಹೊರಗೆ ಹೋಗುವಂತಿಲ್ಲ ಎಂದು ತಿಳಿಸಿದರು.

ಅಭ್ಯರ್ಥಿಗಳು ಪರೀಕ್ಷೆಯ ಪ್ರವೇಶ ಪತ್ರವನ್ನು ಕಡ್ಡಾಯವಾಗಿ ತರಬೇಕು. ಜತೆಗೆ ಯಾವುದಾದರೂ ಒಂದು ಗುರುತಿನ ಚೀಟಿ ಇರಬೇಕು. ಕೊಠಡಿಯಲ್ಲಿ ಗಡಿಯಾರ ಹಾಕಬೇಕು. ಅಭ್ಯರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು. ಪ್ರತಿ ಕೇಂದ್ರಕ್ಕೂ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗುವುದು. ಅಂತೆಯೇ ಕೇಂದ್ರದ 200 ಮೀ ವ್ಯಾಪ್ತಿಯಲ್ಲಿ ಯಾವುದೇ ಜೆರಾಕ್ಸ್ ಅಂಗಡಿ, ಕಂಪ್ಯೂಟರ್ ಸೆಂಟರ್, ಸೈಬರ್‌ಗಳನ್ನು ಪರೀಕ್ಷಾ ಅವಧಿಯಲ್ಲಿ ಮುಚ್ಚಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಚೆಲುವಯ್ಯ, ಡಿವೈಎಸ್ಪಿ ಎಲ್.ಕೆ.ರಮೇಶ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಎಂ.ಎನ್.ಆಶಾಲತಾ ಸೇರಿದಂತೆ ವಿವಿಧ ಕಾಲೇಜಿನ ಪರೀಕ್ಷಾ ಕೇಂದ್ರಗಳ ಪ್ರಾಚಾರ್ಯರು, ವೀಕ್ಷಕರು ಇತರರಿದ್ದರು.