ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಪಿ.ದಿನೇಶ್  
ಜಿಲ್ಲೆ

ನಿಷ್ಠಾವಂತರಿಕಗೆ ಟಿಕೆಟ್ ನೀಡದಿದ್ದರೆ ಸ್ಪರ್ಧೆ ಖಚಿತ: ಎಸ್.ಪಿ.ದಿನೇಶ್

ಶಿವಮೊಗ್ಗ: ನೈಋತ್ಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಆಯನೂರು ಮಂಜುನಾಥ ಅವರನ್ನು ಬದಲಾವಣೆ ಮಾಡಬೇಕು. ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ನೀಡಿದರೆ ಚುನಾವಣೆಯಿಂದ ಹಿಂದೆ ಸರಿದು ಕೆಲಸ ಮಾಡುತ್ತೇನೆ. ಇಲ್ಲವಾದರೆ ಸ್ಪರ್ಧೆ ಖಚಿತ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಪಿ.ದಿನೇಶ್ ಸ್ಪಷ್ಟಪಡಿಸಿದರು.

ಚುನಾವಣೆ ಬಂದಾಗ ಪಕ್ಷದಿಂದ ಪಕ್ಷಕ್ಕೆ ಹಾರುವವರಿಗೆ ಟಿಕೆಟ್ ನೀಡಲಾಗಿದೆ. ಇದರಿಂದ ಪಕ್ಷದ ಗೌರವ ಹಾಗೂ ಸಂಘಟನೆಗೆ ಪೆಟ್ಟು ಬೀಳಲಿದೆ. ಕ್ಷೇತ್ರದಲ್ಲಿ ಪಕ್ಷಕ್ಕಾಗಿ ದುಡಿದವರು ಅನೇಕರಿದ್ದಾರೆ. ನನಗೆ ಬಿ ಫಾರಂ ಕೊಡಬೇಕು. ನನಗೆ ಕೊಡದಿದ್ದರೂ ಪರವಾಗಿಲ್ಲ. ಸಾಮಾನ್ಯ ಕಾರ್ಯಕರ್ತನಿಗೆ ಕೊಟ್ಟರೂ ಕೆಲಸ ಮಾಡುತ್ತೇನೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನೈಋತ್ಯ ಪದವೀಧರರ ಕ್ಷೇತ್ರ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ. 2006ರಿಂದ ಈ ಚುನಾವಣೆಯ ಮೇಲೆ ಕಣ್ಣಿಟ್ಟು ಸಂಪೂರ್ಣ ತಯಾರಿ ಮಾಡಿಕೊಂಡು ಬಂದಿದ್ದೇನೆ. 2012 ಹಾಗೂ 2018ರ ಚುನಾವಣೆಯಲ್ಲಿ ಅತ್ಯಲ್ಪ ಮತದಿಂದ ಸೋತಿದ್ದೆ. ಅದೇ ಕಾರಣಕೆ ಕ್ಷೇತ್ರದಲ್ಲಿ ಕಳೆದ 10 ತಿಂಗಳಿನಿಂದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಂಘಟನೆ ಮಾಡಿಕೊಂಡು ಬಂದಿದ್ದೇನೆ ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನನಗೇ ಟಿಕೆಟ್ ನೀಡುವುದಾಗಿ ಭರವಸೆ ನೀಡಿದ್ದರು. ಕ್ಷೇತ್ರದಲ್ಲಿ ಓಡಾಡಿ ಸಂಘಟನೆ ಕಟ್ಟುವಂತೆ ಬೆನ್ನುತಟ್ಟಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿಸಲಾಗಿದೆ. ಇತ್ತೀಚೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಚುನಾವಣೆಯಿಂದ ಹಿಂದೆ ಸರಿಯುವಂತೆ ಮನವಲಿಸಲು ಪ್ರಯತ್ನ ಪಟ್ಟಿದ್ದರು. ಆದರೆ, ಮುಂದಿಟ್ಟ ಹೆಜ್ಜೆ ಹಿಂದಿಡುವ ಪ್ರಶ್ನೆಯೇ ಇಲ್ಲ ಎಂದು ಅವರಿಗೆ ತಿಳಿಸಿದ್ದೇನೆ. ನೀವೂ ನನ್ನನ್ನು ಬೆಂಬಲಿಸಿ ಎಂದು ಕೋರಿದ್ದೇನೆ ಎಂದು ಹೇಳಿದರು.
ಸರ್ಕಾರಿ ಪದವಿ ಕಾಲೇಜುಗಳ ಅಥಿತಿ ಉಪನ್ಯಾಸಕರ ರಾಜ್ಯ ಸಂಘದ ಅಧ್ಯಕ್ಷ ಹನುಮಂತಪ್ಪ ಆರ್. ಕಲ್ಮನಿ ಮಾತನಾಡಿ, ನಮ್ಮ ಸಂಘಕ್ಕೆ ಕಾನೂನು ಸಲಹೆಗಾರರಾಗಿ ಎಸ್.ಪಿ.ದಿನೇಶ್ ದುಡಿದಿದ್ದಾರೆ. ಕ್ಷೇತ್ರವನ್ನು ಪ್ರತಿನಿಧಿಸುವ ವ್ಯಕ್ತಿಗಳಿಗೆ ಶಕ್ತಿ ನೀಡಬೇಕು. ಇಲ್ಲವಾದರೆ, ನ್ಯಾಯವನ್ನು ಕಗ್ಗೂಲೆ ಮಾಡಿದಂತಾಗುತ್ತದೆ. ಇಲ್ಲಿ ಎಲ್ಲರ ಹಿತ ಕಾಪಾಡಬೇಕು. ನಮ್ಮನ್ನು ದಾರಿ ತಪ್ಪಿಸುವ ಶಕ್ತಿಗಳಿಗೆ ಬೆಂಬಲ ನೀಡುವುದಿಲ್ಲ ಎಂದರು.
ಸಂಘದ ಜಿಲ್ಲಾಧ್ಯಕ್ಷ ರಮೇಶ್ ಬರ್ಗಿ, ಸಂಘದ ಪ್ರಧಾನ ಕಾರ್ಯದರ್ಶಿ ಪೀಟರ್ ವಿನೋದ ಚಂದ್, ಸದಾಶಿವ, ರುದ್ರೇಶ್, ಈಶ್ವರ್ ಸುದ್ದಿಗೋಷ್ಠಿಯಲ್ಲಿದ್ದರು.

15ರಂದು ನಾಮಪತ್ರ ಸಲ್ಲಿಕೆ
ಮೇ 15ಕ್ಕೆ ಮೈಸೂರಿನ ಪ್ರಾದೇಶಿಕ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುತ್ತೇನೆ. ಜನವರಿಯಲ್ಲಿ ಕ್ಷೇತ್ರದ ಪ್ರತಿಯೊಬ್ಬ ಪದವೀಧರರಿಗೆ ಪತ್ರ ಬರೆದಿದ್ದೆ. ಸುಮಾರು 16 ಸಾವಿರ ಜನರು ಪತ್ರಗಳಿಗೆ ಪ್ರತ್ಯುತ್ತರ ಬರೆದು ನನಗೆ ಬೆಂಬಲ ನೀಡಿದ್ದಾರೆ. ಈ ನಿಟ್ಟಿನಲ್ಲಿ ಈಗಿರುವ ಅಭ್ಯರ್ಥಿ ಬದಲಾವಣೆಗೆ ಇನ್ನೂ ಕಾಲಾವಕಾಶವಿದೆ. ಆದ್ದರಿಂದ, ಪ್ರಸ್ತುತ ಇರುವ ಅಭ್ಯರ್ಥಿಯನ್ನು ಬದಲಿಸಬೇಕು. ನನಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಎಸ್.ಪಿ.ದಿನೇಶ್ ಮನವಿ ಮಾಡಿದರು. ಪದವೀಧರ ಕ್ಷೇತ್ರದ ಆರು ಜಿಲ್ಲೆಯ 15 ಶಾಸಕರಲ್ಲಿ 12 ಶಾಸಕರು ಹಾಗೂ 5 ಜಿಲ್ಲಾಧ್ಯಕ್ಷರು ಪಕ್ಷದ ವರಿಷ್ಠರಿಗೆ ನನ್ನ ಹೆಸರು ಸೂಚಿಸಿದ್ದರು. ಆದರೂ ಪಕ್ಷ ನನಗೆ ಟಿಕೆಟ್ ನೀಡದಿರುವುದು ಆಶ್ಚರ್ಯ ಮೂಡಿಸಿದೆ ಎಂದರು.