ಸದೇಶ್ ಕಾರ್ಮಾಡ್ ಮೈಸೂರು
ನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಲು ಪ್ರಾರಂ ಭವಾಗಿದ್ದು, ಗುರುವಾರ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಮಹತ್ವದ ಸಭೆ ಪ್ರತ್ಯೇಕವಾಗಿ ನಡೆಯಿತು. ಕಾಂಗ್ರೆಸ್ ಸದಸ್ಯರ ಸಭೆ ಶನಿವಾರ ನಡೆಯಲಿದೆ.
ಶಾಸಕ ಸಾ.ರಾ. ಮಹೇಶ್ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ನೇತೃತ್ವದಲ್ಲಿ ಜೆಡಿಎಸ್ ಸದಸ್ಯರ ಸಭೆ ನಡೆಯಿ ತು. ಈ ಬಾರಿ ಜೆಡಿಎಸ್ ಮೇಯರ್ ಸ್ಥಾನ ಪಡೆಯಬೇಕು ಎಂದು ಜೆಡಿಎಸ್ ಸದಸ್ಯರು ಒತ್ತಾಯಿಸಿದರು. ಮೇಯರ್ ಸ್ಥಾನಕ್ಕೆ ಎಸ್‌ಬಿಎಂ ಮಂಜು, ಎಂ.ಡಿ.ನಾಗರಾಜ್, ಕೆ.ವಿ. ಶ್ರೀಧರ್, ಸಿ. ರಮೇಶ್ (ರಮಣಿ), ಪ್ರೇಮಾ ಶಂಕರೇಗೌಡ, ಭಾಗ್ಯ ಮಾದೇಶ್, ಅಶ್ವಿನಿ ಅನಂತು ಹಾಗೂ ಲಕ್ಷ್ಮಿ ಶಿವಣ್ಣ ಅವರ ಹೆಸರು ಕೇಳಿ ಬಂತು. ಉಪ ಮೇಯರ್ ಸ್ಥಾನಕ್ಕೆ ರೇಷ್ಮಾ ಬಾನು, ನಿರ್ಮಲ ಹರೀಶ್, ನಮೃತಾ ರಮೇಶ್ ಹಾಗೂ ಬಿಎಸ್‌ಪಿಯಿಂದ ಆಯ್ಕೆಗೊಂಡು ಪ್ರಸ್ತುತ ಜೆಡಿಎಸ್‌ನೊಂದಿಗೆ ಗುರುತಿಸಿಕೊಂಡಿರುವ ಪಲ್ಲವಿ ಬೇಗಂ ಹೆಸರು ಪ್ರಸ್ತಾಪವಾಯಿತು.
ಈ ಬಾರಿಯ ಕೌನ್ಸಿಲ್‌ನಲ್ಲಿ ಜೆಡಿಎಸ್‌ನಿಂದ ಮೇಯರ್ ಸ್ಥಾನ ಅಲಂಕರಿಸಿದ ತಸ್ನಿಂ ಹಾಗೂ ರುಕ್ಮಿಣಿ ಮಾದೇಗೌಡ ಅವರು ಮೇಯರ್ ಸ್ಥಾನದ ಅಧಿಕಾರವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ತಸ್ನಿಂ ಅವಧಿಯಲ್ಲಿ ಕೋವಿಡ್ ಸೋಂಕು, ಲಾಕ್‌ಡೌನ್ ಎದುರಾಯಿತು. ರುಕ್ಮಿಣಿ ಮಾದೇಗೌಡ ಅವರು ಸದಸ್ಯತ್ವ ಕಳೆದುಕೊಂಡ ಹಿನ್ನೆಲೆಯಲ್ಲಿ ಮೇಯರ್ ಆಗಿ ಮುಂದುವರೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಈ ಬಾರಿ ಮೇಯರ್ ಸ್ಥಾನವನ್ನು ಜೆಡಿಎಸ್‌ಗೆ ಪಡೆಯಬೇಕು ಎಂಬ ಅಭಿಪ್ರಾಯ ಸದಸ್ಯರಿಂದ ವ್ಯಕ್ತವಾಯಿತು. ಕಳೆದ ಬಾರಿ ಬಿಜೆಪಿ ಮೇಯರ್ ಸ್ಥಾನ ಅಲಂಕರಿಸಲು ಜೆಡಿಎಸ್ ಪರೋಕ್ಷವಾಗಿ ಸಹಕಾರ ನೀಡಿದ್ದು, ಹೀಗಾಗಿ ಈ ಬಾರಿ ಬಿಜೆಪಿ ನಮಗೆ ಸಹಕಾರ ನೀಡಬೇಕು ಎಂಬ ಅಭಿಪ್ರಾಯ ಜೆಡಿಎಸ್ ಸದಸ್ಯರಿಂದ ಕೇಳಿ ಬಂತು. ಒಂದುವೇಳೆ ಮೈತ್ರಿ ಮಾತುಕತೆ ವಿಫಲ ವಾದರೆ ಪ್ರತಿಪಕ್ಷ ಸ್ಥಾನದಲ್ಲಿ ಕೂರಲು ಸಿದ್ಧರಾಗಿರಬೇಕು ಎಂದು ಜೆಡಿಎಸ್ ವರಿಷ್ಠರು ಸದಸ್ಯರಿಗೆ ನಿರ್ದೇಶನ ನೀಡಿದ್ದಾರೆ.
ಬಿಜೆಪಿ ಸಭೆ:
ನಗರ ಪಾಲಿಕೆ ಬಿಜೆಪಿ ಸದಸ್ಯರ ಸಭೆ ನಗರಾಧ್ಯಕ್ಷ ಶ್ರೀವತ್ಸ ಅಧ್ಯಕ್ಷತೆಯಲ್ಲಿ ನಡೆಯಿತು. ಮೇಯರ್ ಸ್ಥಾನಕ್ಕೆ ಬಿ.ವಿ. ಮಂಜುನಾಥ್, ಮಾ.ವಿ.ರಾಮಪ್ರಸಾದ್, ಶಿವಕುಮಾರ್, ಸತೀಶ್, ಸಾತ್ವಿಕ್, ಶರತ್, ಪ್ರಮೀಳಾ ಭರತ್, ಉಪಮೇಯರ್ ಸ್ಥಾನಕ್ಕೆ ಗೀತಾಶ್ರೀ ಯೋಗಾನಂದ, ಚಂಪಕಾ, ರೂಪಾ, ಉಷಾ ನಾರಾಯಣ್ ಅವರ ಹೆಸರು ಪ್ರಸ್ತಾಪವಾಯಿತು. ಈ ಬಾರಿಯೂ ಮೇಯರ್ ಸ್ಥಾನವನ್ನು ಬಿಜೆಪಿ ಪಡೆಯಲು ಪ್ರಯತ್ನಿಸಬೇಕು ಎಂಬ ಒತ್ತಾಯ ಸದಸ್ಯರಿಂದ ಕೇಳಿ ಬಂತು. ಮೈಸೂರು ಜಿಲ್ಲೆಯ ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ಸೆ.3 ರಂದು ನಗರಕ್ಕೆ ಆಗಮಿಸಲಿದ್ದು, ಆ ಸಂದರ್ಭ ಮೈತ್ರಿ ಹಾಗೂ ಮೇಯರ್ ಸ್ಥಾನದ ಕುರಿತು ಮಹತ್ವದ ಚರ್ಚೆ ನಡೆಯಲಿದೆ.
ಸೆ.3 ರಂದು ಕಾಂಗ್ರೆಸ್ ಸಭೆ:
ಮೇಯರ್ ಚುನಾವಣೆಗೆ ಸದಸ್ಯರ ಅಭಿಪ್ರಾಯ ಆಲಿಸಲು ಸೆ.3 ರಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್, ನಗರಾಧ್ಯಕ್ಷ ಆರ್. ಮೂರ್ತಿ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರ ಸಭೆ ಹಮ್ಮಿಕೊಳ್ಳಲಾಗಿದೆ. ಮೇಯರ್ ಚುನಾವಣೆಯಲ್ಲಿ ಜೆಡಿಎಸ್‌ನೊ ಂದಿಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಯಾವುದೇ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಕಾಂಗ್ರೆಸ್ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ.
ಬಿಜೆಪಿ ಆಕ್ಷೇಪ
ಮೇಯರ್ ಚುನಾವಣೆಯ ಮತದಾರರ ಪಟ್ಟಿಗೆ ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರ ಹೆಸರು ಸೇರ್ಪಡೆಗೊಳಿಸಿರುವುದಕ್ಕೆ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕುರಿತು ಚುನಾವಣಾಧಿಕಾರಿಗೆ ದೂರು ನೀಡಲು ನಿರ್ಧರಿಸಿದೆ. ದಿನೇಶ್ ಗೂಳಿಗೌಡ ಅವರು ಮಂಡ್ಯ ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಗೊಂಡಿದ್ದಾರೆ. ಆದರೆ, ಅವರ ಹೆಸರನ್ನು ಮೈಸೂರು ನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಸೇರ್ಪಡೆ ಮಾಡಿರುವುದು ಸರಿಯಲ್ಲ. ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಡಬೇಕು ಎಂದು ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಆಗ್ರಹಿಸಿದ್ದಾರೆ.