ಜಿಲ್ಲೆ

ಮಾಗಡಿ ಪುರಸಭೆ ಅಧ್ಯಕ್ಷಗಾದಿಗೆ ಪೈಪೋಟಿ

ರೇಷ್ಮೆ ನಗರ ಡೆಸ್ಕ್

ಮಾಗಡಿ: ಮಾಗಡಿ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಸರ್ಕಾರ ಮೀಸಲಾತಿ ಪ್ರಕಟಿಸಿದ ಬೆನ್ನಲ್ಲೆ ಅಧ್ಯಕ್ಷ ಸ್ಥಾನಕ್ಕೆ ಭಾರಿ ಪೈಪೋಟಿ ಶುರುವಾಗಿದೆ.

ಮಾಗಡಿ ಪುರಸಭೆಯಲ್ಲಿ 23 ಸದಸ್ಯರಿದ್ದು, ಜೆಡಿಎಸ್ 12, ಕಾಂಗ್ರೆಸ್ 10 ಹಾಗೂ ಬಿಜೆಪಿಯಿಂದ ಒಂದು ಸ್ಥಾನದಲ್ಲಿ ಗೆದ್ದಿದೆ. ಮೊದಲ ಅವಧಿಯಲ್ಲಿ 1 ಸ್ಥಾನ ಗೆದ್ದಿದ್ದ ಬಿಜೆಪಿಯ ಭಾಗ್ಯಮ್ಮ 14 ತಿಂಗಳು ಅಧ್ಯಕ್ಷರಾದರೆ, ಜೆಡಿಎಸ್‌ನ ವಿಜಯಾ ರೂಪೇಶ್ 16 ತಿಂಗಳು ಅಧ್ಯಕ್ಷರಾಗಿದ್ದರು. ನಂತರ 2ನೇ ಅವಧಿಗೆ 16 ತಿಂಗಳ ಬಳಿಕ ಮೀಸಲಾತಿ ಪ್ರಕಟವಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಪುರುಷ ಮೀಸಲಾತಿ ಪ್ರಕಟವಾಗಿದೆ.

2ನೇ ಅವಧಿಗೆ 14 ತಿಂಗಳು ಬಾಕಿ ಇದ್ದು, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್- ಜೆಡಿಎಸ್‌ನಲ್ಲಿ ಸಾಕಷ್ಟು ಪೈಪೋಟಿ ನಡೆದಿದ್ದು, ಪ್ರಮುಖವಾಗಿ ಕಾಂಗ್ರೆಸ್ 21ನೇ ವಾರ್ಡ್‌ನ ಶಿವರುದ್ರಮ್ಮ ವಿಜಯಕುಮಾರ್, 7ನೇ ವಾರ್ಡ್‌ನ ಮಮತಾ ಗುರುಸ್ವಾಮಿ, 8ನೇ ವಾರ್ಡ್‌ನ ಆಶಾ ಪ್ರವೀಣ, ಜೆಡಿಎಸ್‌ನಿಂದ 15ನೇ ವಾರ್ಡ್‌ನ ರೇಖಾ ನವೀನ್, 1 ನೇವಾರ್ಡ್‌ನ ನಾಗರತ್ನಮ್ಮ ರಾಜಣ್ಣ, 17ನೇ ವಾರ್ಡ್‌ನ ಹೇಮಲತಾ ನಾಗರಾಜು ಪ್ರಮುಖ ಆಕ್ಷಾಂಗಳಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಎಡರು ಪಕ್ಷಗಳಿಂದ ಯಾವುದೇ ಪೈಪೋಟಿ ಇಲ್ಲದಿದ್ದರೂ ಚುನಾವಣೆ ದಿನಾಂಕ ನಿಗದಿ ನಂತರ ಬಿರುಸುಗೊಳ್ಳಲಿದೆ.

ಕಳೆದ 16 ತಿಂಗಳಿಂದ ಪುರಸಭೆಗೆ ಅಧ್ಯಕ್ಷ- ಉಪಾಧ್ಯಕ್ಷರಿಲ್ಲದೆ ಅಧಿಕಾರಿಗಳದ್ದೆ ಆಡಳಿತ ನಡೆಯುತ್ತಿದ್ದ ಕಾರಣ ಸದಸ್ಯರ ಮಾತಿಗೆ ಕಿಮ್ಮತ್ತು ಇಲ್ಲದಂತಾಗಿ ಆಡಳಿತ ಜಡ್ಡುಗಟ್ಟಿತ್ತು. ಮೀಸಲಾತಿ ಪ್ರಕಟ ಹಿನ್ನೆಲೆಯಲ್ಲಿ ಸದಸ್ಯರ ಮುಖದಲ್ಲಿ ಮಂದಹಾಸ ಮೂಡಿದ್ದು, ಪುರಸಭೆ ಕಚೇರಿಗೆ ಈಗ ಕಳೆ ಬಂದಿದೆ.

ಚುರುಕುಗೊಳ್ಳದ ಆಡಳಿತ: ಎಚ್.ಸಿ.ಬಾಲಕೃಷ್ಣ ಶಾಸಕರಾಗುವ ಮುನ್ನ ಪುರಸಭೆಯ ಆಡಳಿತ ವೈಖರಿ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಈಗ ಬಾಲಕೃಷ್ಣ ಶಾಸಕರಾಗಿ ವರ್ಷ ಕಳೆದರೂ ಪುರಸಭೆ ಆಡಳಿತದಲ್ಲಿ ಚುರುಕು ಮುಟ್ಟಿಸುವ ಕೆಲಸ ಮಾಡಿರಲಿಲ್ಲ. ಕಾಂಗ್ರೆಸ್ ಸರ್ಕಾರವಿದ್ದರೂ ಪೂರ್ಣ ಪ್ರಮಾಣದ ಅಧಿಕಾರಿ, ನೌಕರರನ್ನು ಪುರಸಭೆ ನೇಮಿಸುವಲ್ಲಿ ವಿಫಲರಾಗಿದ್ದರು ಎಂದು ಹಿರಿಯ ಸದಸ್ಯರೇ ಶಾಸಕರ ವಿರುದ್ಧ ಬೇಸರ ವ್ಯಕ್ತಪಡಿಸಿದರು.ಅಂತೆಯೇ, ಎಚ್.ಸಿ.ಬಾಲಕೃಷ್ಣ ಬೆಂಬಗಲಿಗರಿಗೆ ಅಧಿಕಾರ ಕೊಡಿಸುವಲ್ಲಿ ಯಶಸ್ವಿಯಾಗಿದ್ದು, ಈ ಬಾರಿ ಮಾಗಡಿ ಪುರಸಭೆಯನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳಲು ರಣತಂತ್ರ ಹೆಣೆಯುತ್ತಿದ್ದಾರೆ. ಇದರ ನಡುವೆ, ಜೆಡಿಎಸ್‌ನ ಮಾಜಿ ಶಾಸಕ ಎ.ಮಂಜುನಾಥ್ ಮೈಸೂರಿನ ಪಾದಯಾತ್ರೆಯಲ್ಲಿ ತೊಡಗಿಕೊಂಡಿರುವುದರಿಂದ ದಿನೇದಿನೆ ಚುನಾವಣೆಯ ಕಾವು ಏರುತ್ತಿರುವುದಂತೂ ಸತ್ಯ.

ಕೈ ಪರ ಬೆಟ್ಟಿಂಗ್: ಕಾಂಗ್ರೆಸ್, ಜೆಡಿಎಸ್ ಅಧ್ಯಕ್ಷ ಆಕಾಂಕ್ಷಿಗಳು ಸಮುದಾಯದ ಹಿರಿಯರಿಂದ ಮುಖಂಡರಿಗೆ ಮನವರಿಕೆ ಮಾಡಿ ಅಧ್ಯಕ್ಷ ಸ್ಥಾನಗಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆದಿದೆ. ತಾಲೂಕಿನಲ್ಲಿ ನಮ್ಮವರೆ ಶಾಸಕರಿದ್ದು, ನಮ್ಮ ಪಕ್ಷದ ಸದಸ್ಯರೇ ಅಧ್ಯಕ್ಷರಾಗುವುದು ಎಂದು ಕಾಂಗ್ರೆಸ್‌ನ ಹಲವು ಸದಸ್ಯರು, ಮುಖಂಡರು ಬೆಟ್ಟಿಂಗ್‌ಗೆ ಮುಂದಾಗಿದ್ದಾರೆ ಎನ್ನಲಾಗಿದೆ.