ಜಿಲ್ಲೆ

ಕೋಮುಲ್​ ಚುನಾವಣೆಗೆ ಪೈಪೋಟಿ ಆರಂಭ

ಕೋಲಾರ ಡೆಸ್ಕ್

ಬಂಗಾರಪೇಟೆ; ಕೋಲಾರ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವಾಗಲೇ ಚುನಾವಣೆಯ ಅಖಾಡ ರಂಗೇರುತ್ತಿದೆ. ಈ ಮಧ್ಯೆ ಮೂರು ಪಕ್ಷಗಳಲ್ಲಿ ಚುನಾವಣೆಗಾಗಿ ಸಾಕಷ್ಟು ಸಿದ್ಧತೆ ನಡೆಯುತ್ತಿದ್ದು, ಈ ಮಧ್ಯೆ ಕಾಂಗ್ರೆಸ್​ ಶಾಸಕರ ಡೆಲಿಗೇಟ್​ ಆಯ್ಕೆ ಕುರಿತು ವಿವಾದ ಸೃಷ್ಟಿಯಾಗಿದೆ.

ಈ ಮಧ್ಯೆ ಬಿಜೆಪಿ ಮತ್ತು ಜೆಡಿಎಸ್​ ಮೈತ್ರಿಯಿಂದ ಹುನುಕುಂದ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಅದೇ ಗ್ರಾಮದ ತಾಪಂ ಮಾಜಿ ಸದಸ್ಯ ವೆಂಕಟೇಶ್​ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಶಾಸಕರ ಡೆಲಿಗೇಟ್​ ಆಯ್ಕೆ ಪ್ರಶ್ನಿಸಿ ತಿರಸರಿಸಬೇಕೆಂದು ವೆಂಕಟೇಶ್​ ಸಲ್ಲಿಸಿರುವ ತಕರಾರು ಅರ್ಜಿಯು ಜಿಲ್ಲಾಧಿಕಾರಿ ಕಚೇರಿಗೆ ವರ್ಗಾವಣೆಯಾಗಿದೆ.

ಕೋಮುಲ್​ ಒಕ್ಕೂಟದ ಚುನಾವಣೆ ಮುಂದಿನ ತಿಂಗಳು ನಿಗದಿಯಾಗಿದ್ದು, ಬಿಜೆಪಿ, ಜೆಡಿಎಸ್​ ಹಾಗೂ ಕಾಂಗ್ರೆಸ್​ ಎರಡು ಗುಂಪುಗಳ ನಡುವೆ ಪೈಪೋಟಿ ನಡೆಯುತ್ತಿದೆ. ಈ ಮಧ್ಯೆ ಶಾಸಕ ನಾರಾಯಣಸ್ವಾಮಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿರುವುದು ವಿವಾದ ಹುಟ್ಟು ಹಾಕಿದೆ. ಕಾಂಗ್ರೆಸ್​ ಗುಂಪುಗಾರಿಕೆ, ಭಿನ್ನಮತದ ನಡುವೆ ಜೆಡಿಎಸ್​ ಮತ್ತು ಬಿಜೆಪಿ ಸಹಕಾರ ಕ್ಷೇತ್ರದ ಚುನಾವಣೆ ರಂಗಪ್ರವೇಶಿಸಿವೆೆ. ಮಾಲೂರಿನ ಕಾಂಗ್ರೆಸ್​ ಶಾಸಕ ಕೆ.ವೈ.ನಂಜೇಗೌಡ ಮತ್ತು ಬಂಗಾರಪೇಟೆ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ನಡುವೆ ಈಗಾಗಲೇ ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಕ್ಷೇತ್ರ ವಿಂಗಡಣೆ ಕುರಿತು ಅಸಮಾಧಾನ, ಅಕ್ರಮ ಕುರಿತು ಬೀದಿ ಜಗಳ ನಡೆದಿತ್ತು. ಈ ಮಧ್ಯೆ ಕೋಚಿಮುಲ್​ ವಿಭಜನೆಯಾದ ನಂತರ ಹೊಸದಾಗಿ ಕ್ಷೇತ್ರ ವಿಗಂಡಣೆ ಮಾಡಲು ಅಧಿಸೂಚನೆ ಹೊರಡಿಸಿದ ವೇಳೆಯೂ ಅಸಮಾಧಾನ ಶುರುವಾಗಿತ್ತು. ಅಲ್ಲಿಂದ ಇಬ್ಬರು ಶಾಸಕರ ನಡುವೆ ಜಿದ್ದಾಜಿದ್ದಿನ ಪೈಪೋಟಿಗೆ ವೇದಿಕೆ ಸಜ್ಜಾಗಿದೆ.

ಈಗಾಗಲೇ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಒಂದು ಅವಧಿಯ ಅಧ್ಯಕ್ಷ ಪಟ್ಟವನ್ನು ಪೂರ್ಣಗೊಳಿಸಿ ಎರಡನೇ ಅವಧಿಗೂ ತಯಾರಿ ನಡೆಸುತ್ತಿರುವಾಗ ದಿಢೀರನೇ ಎಸ್​.ಎನ್​.ನಾರಾಯಣಸ್ಚಾಮಿ ನತ್ತಿಬೆಲೆ ಗ್ರಾಮದ ಹಾಲು ಉತ್ಪಾದಕರ ಪ್ರತಿನಿಧಿಯಾಗಿ(ಡೆಲಿಗೇಟ್​) ಆಯ್ಕೆಯಾಗಿ ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ತಯಾರಿ ನಡೆಸಿರುವ ಕುರಿತು ಸಂದೇಶ ರವಾನಿಸಿದ್ದಾರೆ.

ಕಾಂಗ್ರೆಸ್​ ಶಾಸಕರು ಎರಡು ಗುಂಪುಗಳಾಗಿ ಮುಸುಕಿನ ಗುದ್ದಾಟ ನಡೆಯುತ್ತಿರುವಾಗ ಜೆಡಿಎಸ್​ ಮತ್ತು ಬಿಜೆಪಿ ಸಹಕಾರ ರಂಗ ಪ್ರವೇಶ ಮಾಡಿದೆ. ಶಾಸಕ ನಾರಾಯಣಸ್ವಾಮಿ ಕಾನೂನು ಬಾಹಿರವಾಗಿ ನತ್ತಬೆಲೆ ಹಾಲು ಉತ್ಪಾದಕರ ಸಂಘದಿಂದ ಪ್ರತಿನಿಧಿಯಾಗಿದ್ದು, ಇವರು ದಾಖಲೆಗಳನ್ನು ತಿರುಚಿ, ತಮ್ಮ ಪ್ರಭಾವ ಬಳಸಿಕೊಂಡು ಡೆಲಿಗೇಟ್​ ಪಡೆದಿದ್ದಾರೆ. ಡೆಲಿಗೇಟ್​ ಆಗಬೇಕಾದರೆ ರೈತನಾಗಿರಬೇಕು, ಡೇರಿಗೆ ಹಾಲು ಹಾಕಿರಬೇಕು, ಸರ್ಕಾರದ ಸಹಾಯಧನ ಪಡೆದಿರಬೇಕು, ಆದ್ರೆ ಇದ್ಯಾವುದೂ ಇಲ್ಲದೆ ಅಕ್ರಮವಾಗಿ ಡೆಲಿಗೇಟ್​ ಆಗಿದ್ದು, ಇವರಿಗೆ ಅವಕಾಶ ನೀಡಬಾರದೆಂದು ಒತ್ತಾಯ ಮಾಡಲಾಗಿದೆ.

ಮೈತ್ರಿ ನಿಯೋಗ ದೂರು

ಈಗಾಗಲೇ ಜೆಡಿಎಸ್​ ಹಾಗೂ ಬಿಜೆಪಿ ನಿಯೋಗ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ಜನಪ್ರತಿನಿಧಿ ಡೆಲಿಗೆಟ್​ ಆಗಲು ಸಾಧ್ಯವಿಲ್ಲ. ಹಿಂಬಾಗಿಲ ಮೂಲಕ ಶಾಸಕ ನಾರಾಯಣಸ್ವಾಮಿ ಆಯ್ಕೆ ಕುರಿತು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಂಸದ ಮುನಿಸ್ವಾಮಿ ಒತ್ತಾಯಿಸಿದ್ದಾರೆ. ತಮ್ಮ ಡೆಲಿಗೇಟ್​ ವಿವಾದಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಯನ್ನು ಶಾಸಕರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವುದಾಗಿ ತಿಳಿದು ಬಂದಿದೆ. ಶಾಸಕರ ಡೆಲಿಗೇಟ್​ ಪುರಸತಗೊಂಡಲ್ಲಿ ನಾರಾಯಣಸ್ವಾಮಿ ಮತ್ತು ಹುನುಕುಂದ ವೆಂಕಟೇಶ್​ ಮಧ್ಯೆ ತೀವ್ರ ಪೈಪೋಟಿ ಎದುರಾಗಲಿದೆ.

ಒಕ್ಕೂಟಕ್ಕೆ ಮಹಿಳಾ ಪ್ರತಿನಿಧಿ ಆಯ್ಕೆ

ಜಿಲ್ಲೆಯ ಆರು ತಾಲೂಕುಗಳ ಪೈಕಿ ಬಂಗಾರಪೇಟೆ, ಮಾಲೂರು, ಕೆಜಿಎಫ್​ ತಾಲೂಕುಗಳಿಗೆ ಒಬ್ಬರು ಮಹಿಳಾ ಪ್ರತಿನಿಧಿಯನ್ನು ಒಕ್ಕೂಟಕ್ಕೆ ನಿರ್ದೇಶಕರನ್ನಾಗಿ ಆಯ್ಕೆ ಮಾಡಬೇಕು. ಮಾಲೂರು ಶಾಸಕ ನಂಜೇಗೌಡರು ಬೆಂಬಲಿಸುವ ಅಭ್ಯರ್ಥಿ ಆಯ್ಕೆಯೇ ಬಹುತೇಕ ಖಚಿತವಾಗಿದ್ದು, ಈ ಸ್ಥಾನಕ್ಕೆ ಹೇಳಿಕೊಳ್ಳುವಂತ ಪೈಪೋಟಿ ಕಂಡು ಬರುತ್ತಿಲ್ಲ.