ಜಿಲ್ಲೆ

ಚಿಣ್ಣರನ್ನು ಪೈಪೋಟಿಗೆ ನೂಕುವುದು ಸಲ್ಲದು

Chitradurga

ಚಿತ್ರದುರ್ಗ: ಐಎಎಸ್, ಐಪಿಎಸ್ ಸೇರಿ ಉನ್ನತ ಹುದ್ದೆ ಅಲಂಕರಿಸಬೇಕು ಎಂಬ ಒತ್ತಡ ಹೇರುವ ಮೂಲಕ ಮಕ್ಕಳನ್ನು ಪಾಲಕರು, ಪೈಪೋಟಿಗೆ ನೂಕುತ್ತಿರುವುದು ವಿಷಾದನೀಯ. ಇದು ಸಲ್ಲದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಕೆ.ಗಿರೀಶ್ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಚಿತ್ರ ಡಾನ್ ಬೋಸ್ಕೋ ಸಂಸ್ಥೆ ಹಾಗೂ ಬ್ರೆಡ್ಸ್‌ನಿಂದ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ರಕ್ಷಣೆಯ ಸಹಭಾಗೀದಾರರ ಸಭೆ ಉದ್ಘಾಟಿಸಿ ಮಾತನಾಡಿದರು.

ಪಾಲಕರು ಮಕ್ಕಳನ್ನು ನಿದ್ರೆಯಿಂದ ವಂಚಿತರನ್ನಾಗಿಸಿದರೆ ಆರೋಗ್ಯ ಹಾಳಾಗಲಿದೆ. ಇದು ಕೂಡ ಹಕ್ಕುಗಳ ಉಲ್ಲಂಘನೆಯಾಗಲಿದೆ. ಆದ ಕಾರಣ ಜವಾಬ್ದಾರಿಯಿಂದ ನಡೆದುಕೊಂಡು ಸ್ವಾತಂತ್ರೃ ಹರಣ ಆಗದಂತೆ ನೋಡಿಕೊಳ್ಳಬೇಕು. ಪುಸ್ತಕದ ಜ್ಞಾನದ ಜತೆಗೆ ಸಾಮಾನ್ಯ ಜ್ಞಾನಕ್ಕೂ ಹೆಚ್ಚು ಆದ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್ ಮಾತನಾಡಿ, ಮಕ್ಕಳ ಹಕ್ಕುಗಳ ಕುರಿತು ಸಮಾಜದಲ್ಲಿ ಅರಿವಿನ ಕೊರತೆ ಇದೆ. ಹೀಗಾಗಿ ಜಾಗೃತಿ ಮೂಡಿಸುವ ಅಗತ್ಯವಿದೆ. ಬದುಕುವ, ವಿಕಾಸ ಹೊಂದುವ, ರಕ್ಷಣೆ ಪಡೆಯುವ, ಪಾಲ್ಗೊಳ್ಳುವ ಸೇರಿ ಹಲವು ಹಕ್ಕುಗಳಿವೆ. ಆದರೆ, ಪಾಲಕರಿಂದಲೇ ಉಲ್ಲಂಘನೆಯಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಬ್ರೆಡ್ಸ್ ನಿರ್ದೇಶಕ ರೆವರೆಂಡ್ ಫಾದರ್ ರೂಬಿನ್ ಮ್ಯಾಥ್ಯೂ, ಡಿಎಚ್‌ಒ ಡಾ.ಆರ್.ರಂಗನಾಥ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಆರ್.ಪ್ರಭಾಕರ್, ಸದಸ್ಯೆ ಡಿ.ಕೆ.ಶೀಲಾ, ಜಿಲ್ಲಾ ಕಾರ್ಮಿಕಾಧಿಕಾರಿ ಸಿ.ಎನ್.ಯಶೋಧರ, ಇಲಾಖೆ ನಿರೂಪಣಾಧಿಕಾರಿ ಕೆಂಪಹನುಮಯ್ಯ, ಟಿಎಚ್‌ಒ ಡಾ.ಬಿ.ವಿ.ಗಿರೀಶ್, ಪೊಲೀಸ್ ಇಲಾಖೆಯ ಕಾಳಿ ಕೃಷ್ಣ, ಸಂಸ್ಥೆಯ ರೆ.ಫಾ.ಜಾನ್‌ಪೌಲ್, ರೆ.ಫಾ.ಸಜಿ ಜಾರ್ಜ್ ಇತರರಿದ್ದರು.