ಜಗಳೂರು: ತಾಲೂಕಿನ ಬಸವನಕೋಟೆ ಗ್ರಾಮದಲ್ಲಿ ಚರಂಡಿ ಹೂಳು ತೆಗೆಯುವ ಸಂದರ್ಭದಲ್ಲಿ ವಿಷ ಗಾಳಿ ಸೇವನೆಯಿಂದ ಮೃತಪಟ್ಟಿದ್ದ ಮೈಲಪ್ಪ ಮತ್ತು ಸತ್ಯಪ್ಪ ಅವರ ಕುಟುಂಬಗಳಿಗೆ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವತಿಯಿಂದ ತಲಾ ಒಂದು ಲಕ್ಷ ರೂ. ಪರಿಹಾರ ಹಣದ ಚೆಕ್ ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಭಾನುವಾರ ವಿತರಿಸಿದರು.
ಮೃತರ ಕುಟುಂಬಗಳಿಗೆ ಅಧಿಕಾರಿಗಳ ಜತೆ ಭೇಟಿ ನೀಡಿದ ಶಾಸಕರು, ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಏನೇ ಸಮಸ್ಯೆಗಳಿದ್ದರೂ ನನ್ನೊಂದಿಗೆ ಹಂಚಿಕೊಳ್ಳಿ. ಸಾಧ್ಯವಾದಷ್ಟು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧ್ದಿ ಅಧಿಕಾರಿ ಮತ್ತು ಸಿಬ್ಬಂದಿ ಚರಂಡಿ ಸ್ವಚ್ಛತೆ ಸೇರಿದಂತೆ ಅಭಿವೃದ್ಧ್ದಿ ಕೆಲಸದ ವಿಚಾರದಲ್ಲಿ ಮುಂಜಾಗರೂಕತೆ ವಹಿಸಬೇಕು. ಇಂತಹ ಘಟನೆಗಳು ಮುಂದೆ ಮರುಕಳಿಸದಂತೆ ನಿಗಾ ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.
ಸಮಾಜ ಕಲ್ಯಾಣಾಧಿಕಾರಿ ಬಿ. ಮಹೇಶ್ವರಪ್ಪ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಡಿ.ಎಂ. ರಮೇಶ್, ತಹಸೀಲ್ದಾರ್ ಸಂತೋಷ್‌ಕುಮಾರ್, ತಾಪಂ ಇಒ ಚಂದ್ರಶೇಖರ್, ಸಿಪಿಐ ಸೋಮಶೇಖರ್ ಕೆಂಚರೆಡ್ಡಿ, ಗ್ರಾಪಂ ಅಧ್ಯಕ್ಷ ಎಸ್. ಜ್ಯೋತಿಲಿಂಗಪ್ಪ, ಮುಖಂಡರಾದ ಪ್ರಕಾಶ್, ಮಹಾಲಿಂಗಸ್ವಾಮಿ, ಪ್ರಸನ್ನಕುಮಾರ್, ಜಿ.ಎಸ್. ಕೊಟ್ರೇಶ್ ಮತ್ತಿತರರಿದ್ದರು.
ಸಭೆ ಮುಂದೂಡಿಕೆ: 57 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ವಿಳಂಬ ಹಿನ್ನೆಲೆಯಲ್ಲಿ ಜು.19ರಂದು ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆ ಮುಂದೂಡಲಾಗಿದೆ. ಅಂದು ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ವಿದೇಶಕ್ಕೆ ತೆರಳಲಿದ್ದಾರೆ. ಸಂಸದ ಜಿ.ಎಂ. ಸಿದ್ದೇಶ್ವರ್ ಅವರಿಗೂ ದೆಹಲಿಗೆ ಬರುವಂತೆ ಹೈಕಮಾಂಡ್ ಬುಲಾವ್ ನೀಡಿದೆ. ಆದ್ದರಿಂದ ಅವರನ್ನು ಬಿಟ್ಟು ಸಭೆ ನಡೆಸುವುದು ಸಮಂಜಸವಲ್ಲ. ಹಾಗಾಗಿ, ಮುಂದಿನ ದಿನಗಳಲ್ಲಿ ಸಮಯ ನಿಗದಿಪಡಿಸಿ ಸಭೆ ಹಮ್ಮಿಕೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.