ಮೂಡಿಗೆರೆ: ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಶಾಸಕಿ ನಯನಾ ಮೋಟಮ್ಮ ಅವರೊಂದಿಗೆ ಭೇಟಿ ನೀಡಿದರು. ಕುನ್ನಳ್ಳಿ ಗ್ರಾಮದ ಗಿರಿಜಮ್ಮ ಹಾಗೂ ಜಯಮ್ಮ ಎಂಬುವರ ನೆಲಸಮವಾದ ಮನೆ ವೀಕ್ಷಿಸಿದರು. ಆದರೆ ಮಳೆಯಿಂದ ಹಾನಿಯಾದ ಇತರ ಕಡೆಗಳಿಗೆ ತೆರಳದೆ ಅಧಿಕಾರಿಗಳ ಸಭೆ ನಡೆಸದೆ ತರಾತುರಿಯಲ್ಲಿ ವಾಪಸಾದರು.
ಮನೆ ವೀಕ್ಷಿಸಿ ಕೆ.ಜೆ.ಜಾರ್ಜ್ ಮಾತನಾಡಿ, ಒಂದು ತಿಂಗಳಿನಿಂದ ನಿರಂತರ ಮಳೆಯಿಂದ ಬಹಳಷ್ಟು ಹಾನಿ ಸಂಭವಿಸಿದೆ. ಮನೆಗಳು ಕುಸಿದಿವೆ. ರಸ್ತೆ, ಚರಂಡಿ, ಮೋರಿಗಳು ಕೊಚ್ಚಿಕೊಂಡು ಹೋಗಿವೆ. ಜಿಲ್ಲಾಡಳಿತ ಎಚ್ಚರಿಕೆ ಕ್ರಮ ಕೈಗೊಂಡಿದ್ದರಿಂದ ಹೆಚ್ಚು ಅನಾಹುತವಾಗಿಲ್ಲ. ಮೊದಲೇ ಅಧಿಕಾರಿಗಳ ತಂಡ ರಚಿಸಲಾಗಿತ್ತು. ತಂಡಗಳು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಿದ್ದರಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂದರು.
ಕೆಲವೆಡೆ ಮನೆ ಕುಸಿದಿದೆ. ಸಂತ್ರಸ್ತರಿಗೆ ಪರಿಹಾರ ನೀಡಲಾಗಿದೆ. ಕುಸಿದ ಅನಧಿಕೃತ ಮನೆಗಳಿಗೂ ಪರಿಹಾರ ನೀಡಲಾಗುವುದು. ಮನೆ ಕಳೆದುಕೊಂಡವರಿಗೆ ಭರವಸೆ ನೀಡಿ ಪರಿಹಾರ ನೀಡದೆ ಪಲಾಯನ ಮಾಡುವುದಿಲ್ಲ. ಮನೆ ಕುಸಿತಕ್ಕೆ ತಕ್ಷಣ ಪರಿಹಾರ ನೀಡಲಾಗುವುದು. ನಿರಾಶ್ರಿತರಿಗಾಗಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಕುಸಿದ ಶಾಲೆ, ಕಾಲೇಜು ಕಟ್ಟಡ, ಕೊಚ್ಚಿಹೋದ ರಸ್ತೆ, ಮೋರಿ, ಗುಡ್ಡ ಕುಸಿತ, ರೈತರ ಜಮೀನು ಹಾನಿ ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟದ ಸಮಗ್ರ ವರದಿ ತಯಾರಿಸಿ ಸರ್ಕಾರಕ್ಕೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವರದಿ ಬಂದ ಕೂಡಲೆ ತುರ್ತು ಪರಿಹಾರ ಕಾರ್ಯ ನಡೆಯಲಿದೆ ಎಂದು ಹೇಳಿದರು.
ಯಾರೂ ಭಯಪಡುವ ಅಗತ್ಯವಿಲ್ಲ. ಸರ್ಕಾರ ಸಮರ್ಪಕವಾಗಿ ಎಲ್ಲ ರೀತಿಯ ಪರಿಹಾರ ಕಾರ್ಯ ನಡೆಸಲಿದೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆಯಿಂದ ಕುಡಿಯುವ ನೀರಿಗೆ ತೊಂದರೆಯಾಗಿದೆ ಎಂಬ ಮಾಹಿತಿಯಿದೆ. ವಿದ್ಯುತ್ ಸಮಸ್ಯೆ ಸರಿಪಡಿಸಲು ಮೆಸ್ಕಾಂಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದೆ. ಅಧಿಕಾರಿಗಳು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಲ್ಲ ಗ್ರಾಮಗಳಿಗೂ ಕೂಡಲೆ ವಿದ್ಯುತ್ ಪೂರೈಕೆ ಮಾಡಲು ತುರ್ತು ಕ್ರಮ ಕೈಗೊಳ್ಳುವಂತೆ ಹಾಗೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಉಪಸಭಾಪತಿ ಎಂ.ಕೆ.ಪ್ರಾಣೇಶ್, ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಎಸ್ಪಿ ಡಾ. ವಿಕ್ರಮ್ ಅಮಟೆ ಇತರರಿದ್ದರು.
ನನ್ನ ಕ್ಷೇತ್ರದಲ್ಲಿ ಅನೇಕ ಮನೆಗಳು ಕುಸಿದಿವೆ. ನಿರಾಶ್ರಿತರಿಗೆ ತಕ್ಷಣವೇ ಪರಿಹಾರ ಒದಗಿಸಲಾಗಿದೆ. ಹಕ್ಕು ಪತ್ರವಿಲ್ಲದ ಕುಸಿದ ಅನಧಿಕೃತ ಮನೆಗಳಿಗೂ ಪರಿಹಾರ ನೀಡಲು ಸಚಿವ ಸಂಪುಟದಲ್ಲಿ ನಿರ್ಧಾರವಾಗಿದೆ. ಪರಿಹಾರ ಕೊಟ್ಟಮಾತ್ರಕ್ಕೆ ಮನೆ ದುರಸ್ತಿಪಡಿಸಲು ಸಾಧ್ಯವಾಗುವುದಿಲ್ಲ. ನಿರಾಶ್ರಿತರಿಗೆ ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಮನೆ ನೀಡಲಾಗುವುದು ಎಂದು ಶಾಸಕಿ ನಯನಾ ಮೋಟಮ್ಮ ತಿಳಿಸಿದರು. ಕೆಲವೆಡೆ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಅಲ್ಲಲ್ಲಿ ಭೂಕುಸಿತ ಸಂಭವಿಸಿದೆ. ರೈತರ ಜಮೀನು ಹಾನಿಯಾಗಿದೆ. ಮಳೆಯಿಂದ ಹಾನಿಯಾದ ಎಲ್ಲ ಕಡೆಗೆ ನಾನು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಎಲ್ಲವನ್ನೂ ಅಧಿಕಾರಿಗಳು ಅವಲೋಕಿಸಿ ವರದಿ ತಯಾರಿಸಲಿದ್ದಾರೆ. ಮಳೆಹಾನಿ ಪರಿಹಾರಕ್ಕೆ ಜಿಲ್ಲಾಧಿಕಾರಿ ಖಾತೆಯ ಅನುದಾನ ಬಳಸಿಕೊಳ್ಳಲಾಗುವುದು. ಅಧಿಕಾರಿಗಳ ವರದಿ ಬಂದ ಬಳಿಕ ಹೆಚ್ಚುವರಿ ಅನುದಾನಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ವಿವಿಧ ಇಲಾಖೆಗಳ ಸಚಿವರೊಂದಿಗೆ ಚರ್ಚೆ ನಡೆಸಿ ಹೆಚ್ಚುವರಿ ಅನುದಾನ ತರಲು ಪ್ರಯತ್ನಿಸಲಾಗುವುದು ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಮೂಡಿಗೆರೆ ತಾಲೂಕಿನ ಕುನ್ನಹಳ್ಳಿಯಲ್ಲಿ ನೆಲಸಮವಾದ ಎರಡು ಮನೆಗಳನ್ನು ವೀಕ್ಷಿಸಿ ಆಲ್ದೂರಿನಲ್ಲಿ ಕಾಳಜಿ ಕೇಂದ್ರಕ್ಕೆ ತೆರಳಿ ನಿರಾಶ್ರಿತರೊಂದಿಗೆ ಮಾತುಕತೆ ನಡೆಸಿದ್ದಾರೆ. ಹವ್ವಳ್ಳಿಯಲ್ಲಿ ಕುಸಿದಮನೆ ಮತ್ತು ಶಾಲೆಗೆ ಭೇಟಿ ನೀಡಿದ್ದಾರೆ. ಎಲ್ಲವನ್ನೂ ವೀಕ್ಷಿಸಿರುವ ಸಚಿವರು ಹೆಚ್ಚಿನ ಅನುದಾನ ನೀಡಲು ತಯಾರಾಗಿದ್ದಾರೆ ಎಂದು ತಿಳಿಸಿದರು.