ಮಧ್ಯಾಹ್ನ 12ಕ್ಕೆ ಆರಂಭವಾದ ಸಭೆ ಒಂದು ಗಂಟೆಯಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, ಭೂಸ್ವಾಧೀನಕ್ಕೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದ ಪಾಲಿಕೆಯನ್ನು ನ್ಯಾಯಾಂಗ ನಿಂದನೆಯಿಂದ ತಪ್ಪಿಸುವುದಕ್ಕೆ ಯಾವ ಕ್ರಮ ಅನುಸರಿಸಬೇಕೆಂದು ಎಲ್ಲ ಸದಸ್ಯರು ಚರ್ಚಿಸಿದರು. ಈ ಮಧ್ಯೆ ಕಾಂಗ್ರೆಸ್-ಬಿಜೆಪಿ ನಾಯಕರ ಹಗ್ಗ-ಜಗ್ಗಾಟದಿಂದಾಗಿ ಸಭೆ ಸಂಜೆವರೆಗೂ ನಡೆಯಿತು. ಶಾಸಕ ಆಸೀಫ್ ಸೇಠ್ ಸೇರಿ ಕಾಂಗ್ರೆಸ್‌ನ ಸದಸ್ಯರು ಆಡಳಿತಾರೂಢ ಬಿಜೆಪಿಯವರ ಮೇಲೆ ಹರಿಹಾಯ್ದರು.
ಯಾರೋ ಮಾಡಿದ ತಪ್ಪಿಗಾಗಿ ನಾವೇಕೇ ಶಿಕ್ಷೆ ಅನುಭವಿಸಬೇಕು. ಪಾಲಿಕೆ ಖಜಾನೆಯಲ್ಲಿ ಈಗ ಲಭ್ಯವಿರುವ ಹಣವನ್ನೆಲ್ಲ ಪರಿಹಾರಕ್ಕೆ ಕೊಟ್ಟು ನಾವೂ ಕೈಚೆಲ್ಲಿ ಕುಳಿತುಕೊಳ್ಳೋಣವೇ. ಅಭಿವೃದ್ಧಿಗೆ ತಡೆ ಬೀಳುವುದಿಲ್ಲವೇ ಎಂದು ಪ್ರಶ್ನಿಸಿದರು. ಬಿಜೆಪಿಯವರು ಎಷ್ಟೇ ಸಮರ್ಥಿಸಿಕೊಳ್ಳಲು ಯತ್ನಿಸಿದರೂ ಅವರು ಪಟ್ಟು ಸಡಿಲಿಸಲಿಲ್ಲ. ಒಂದು ಹಂತಕ್ಕೆ ಸಭೆ ಮೊಟಕುಗೊಂಡು, ಎರಡನೇ ಹಂತದಲ್ಲಿ ಮುಂದುವರಿದರೂ ಒಮ್ಮತದ ಅಭಿಪ್ರಾಯ ಮೂಡಲಿಲ್ಲ. ಕಾಂಗ್ರೆಸ್‌ನ ಸದಸ್ಯರು ಮತ್ತು ಕಾಂಗ್ರೆಸ್‌ನ ಶಾಸಕರು ಎಷ್ಟೇ ಮನವಿ ಮಾಡಿದರೂ ಸ್ಪಂದಿಸದ ಮೇಯರ್ ಸವಿತಾ ಕಾಂಬಳೆ, ಈ ಪ್ರಕರಣದಲ್ಲಿ ನ್ಯಾಯಾಂಗ ನಿಂದನೆಯಿಂದ ಪಾರಾಗುವ ದಿಸೆಯಿಂದ 20 ಕೋಟಿ ರೂ. ಪರಿಹಾರದ ಮೊತ್ತವನ್ನು ಠೇವಣಿ ರೂಪದಲ್ಲಿ ಭರಿಸಲಾಗುವುದು ಎಂಬ ನಿರ್ಣಯ ಕೈಗೊಂಡರು.
ಅಧಿಕಾರಿಗಳಿಂದ ನಡೆದ ದೊಡ್ಡ ಪ್ರಮಾದ:
ಶಹಾಪುರ ಬ್ಯಾಂಕ್ ಆಫ್ ಇಂಡಿಯಾದಿಂದ ಹಳೇ ಪಿ.ಬಿ.ರಸ್ತೆವರೆಗೆ ಸಿಡಿಪಿ ರಸ್ತೆಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ರಸ್ತೆ ನಿರ್ಮಾಣಕ್ಕೆ ಭೂ-ಸ್ವಾಧೀನ ಮಾಡದೇ ಪಾಲಿಕೆಯು ಸ್ಮಾರ್ಟ್‌ಸಿಟಿ ಕಂಪನಿಗೆ ನಿರಪೇಕ್ಷಣಾ ಪತ್ರ (ಎನ್‌ಒಸಿ) ನೀಡಿರುವ ಅಧಿಕಾರಿಗಳನ್ನು ಸದಸ್ಯರು, ಪಕ್ಷಬೇಧ ಮರೆತು ತರಾಟೆಗೆ ತೆಗೆದುಕೊಂಡರು. ಭೂ ಸ್ವಾಧೀನ ನಿಯಮಾವಳಿಯನ್ವಯ ಸ್ವಾಧೀನ ಮಾಡಿಕೊಳ್ಳುವಂತೆ 2021ರಲ್ಲೇ ಹೈಕೋರ್ಟ್ ನಿರ್ದೇಶನ ನೀಡಿದೆ. ಸ್ಮಾರ್ಟ್‌ಸಿಟಿ ಕಂಪನಿಯಾಗಲಿ, ಪಾಲಿಕೆಯಾಗಲಿ ಈ ಹಂತದಲ್ಲಿ ಯಾವುದೇ ಕ್ರಮಕ್ಕೆ ಮುಂದಾಗದೆ, ಭೂ ಸ್ವಾಧೀನ ಮಾಡದೇ ರಸ್ತೆ ನಿರ್ಮಿಸಿದ್ದರಿಂದ ಭೂಮಿ ಕಳೆದುಕೊಂಡ ಅರ್ಜಿದಾರ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಪ್ರಕರಣ ಕುರಿತಂತೆ 2022ರಲ್ಲಿ ಪರಿಹಾರ ನೀಡದ ಪಾಲಿಕೆ ವಿರುದ್ಧ ನ್ಯಾಯಾಂಗ ನಿಂದನೆಯಾಗಿದೆ. ಮತ್ತೆ ಎರಡು ವರ್ಷ ಕಳೆದರೂ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಶಾಸಕ ಆಸೀಫ್ ಸೇಠ್ ಆದಿಯಾಗಿ ಎಲ್ಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಮಹಾನಗರ ಪಾಲಿಕೆಯ ಕಾನೂನು ಸಲಹೆಗಾರ ಉಮೇಶ ಮಹಾಂತಶೆಟ್ಟರ್, ಅರ್ಜಿದಾರ ಕೋರ್ಟ್ ಮೊರೆ ಹೋದಾಗ ಕೋರ್ಟ್, ನಿರ್ದಿಷ್ಟವಾಗಿ ‘ಪಾಲಿಕೆಯವರನ್ನಾಗಲಿ, ಸ್ಮಾರ್ಟ್‌ಸಿಟಿ ಕಂಪನಿಯವರನ್ನಾಗಲಿ ಪ್ರತಿವಾದಿಯಾಗಿ ಮಾಡಲಿಲ್ಲ. ಸಂಬಂಧಿತರು ನಿಯಮಾವಳಿಯಂತೆ ಪರಿಹಾರ’ ನೀಡುವಂತೆ ನಿರ್ದೇಶಿಸಿತ್ತು. ಹೀಗಾಗಿ ವಿಳಂಬವಾಗಿದೆ ಎಂದು ಸಮಜಾಯಿಸಿ ನೀಡಿದರು. ಮುಂದುವರಿದು ಕೋರ್ಟ್, ಭೂ-ಸ್ವಾಧೀನ ಅಧಿಕಾರಿಯಾಗಿರುವ ಉಪವಿಭಾಗಾಧಿ ಬಳಿ ಠೇವಣಿ ಇಡುವಂತೆ ನಿರ್ದೇಶನ ನೀಡಿದೆ. ಉಪವಿಭಾಗಾಧಿಕಾರಿಗಳು ಭೂಮಿಯ ಮೌಲ್ಯಮಾಪನ ಮಾಡಿ ಅಂಜಾಜು ಮೌಲ್ಯವಾದ 20 ಕೋಟಿ ರೂ. ಠೇವಣಿ ಇಡುವಂತೆ ಆದೇಶಿಸಿದ್ದಾರೆ. ಈ ಹಣ ಠೇವಣಿ ಇಡದಿದ್ದರೆ ಪಾಲಿಕೆಯು ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ ಎಂದು ಸಭೆ ತಿಳಿಸಿದರು.
ಭೂ- ಸ್ವಾಧೀನ ಮಾಡದೇ ರಸ್ತೆ ಅಗಲೀಕರ ಮಾಡಿದ ಪ್ರಕರಣ:
ಭೂ-ಸ್ವಾಧೀನ ಮಾಡಿಕೊಂಡು ಬಳಿಕ ರಸ್ತೆ ನಿರ್ಮಾಣ ಮಾಡಬೇಕು. ಆದರೆ, ಇಲ್ಲಿ ರಸ್ತೆ ನಿರ್ಮಾಣ ಮಾಡಿದ ಬಳಿಕ ಭೂ-ಸ್ವಾಧೀನಕ್ಕೆ ಪರಿಹಾರ ನೀಡುತ್ತಿರುವುದು ಅಧಿಕಾರಿಗಳಿಂದ ನಡೆದ ದೊಡ್ಡ ಪ್ರಮಾದವಾಗಿದೆ ಎಂದು ಸದಸ್ಯರು ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕಿ ಸಯೀದಾ ಬಾನು ಬಳ್ಳಾರಿ ಅವರನ್ನು ತರಾಟೆಗೆ ತೆಗೆದುಕೊಂಡರು. ಮೊದಲು ಭೂಸ್ವಾಧೀನ ಮಾಡಿಕೊಂಡು, ರಸ್ತೆ ನಿರ್ಮಿಸುತ್ತಿರೋ ಇಲ್ಲವೇ, ರಸ್ತೆ ನಿರ್ಮಿಸಿ ಭೂ-ಸ್ವಾಧೀನ ಮಾಡುತ್ತೀರೋ ಎಂದು ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದರು. ಆಗ ಪಾಲಿಕೆಯಿಂದ ಎನ್‌ಒಸಿ ನೀಡಿದ್ದರಿಂದ ರಸ್ತೆ ನಿರ್ಮಿಸಿದ್ದೇವೆ ಎಂದು ಜಾರಿಕೊಂಡರು. ಕಾನೂನಿನಂತೆ ಭೂ-ಸ್ವಾಧೀನ ಮಾಡಿಕೊಳ್ಳುವಂತೆ ಹೈಕೋರ್ಟ್‌ನಿಂದ ನಿರ್ದೇಶನ ಬಳಿಕ ಅಂದಿನ ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು ಎಂದು ಪಾಲಿಕೆ ಕಾನೂನು ಸಲಹೆಗಾರ ಮಹಾಂತಶೆಟ್ಟರ್ ಸಭೆಗೆ ತಿಳಿಸಿದರು. ಆಗ ಸದಸ್ಯರು, 2 ವರ್ಷದ ಹಿಂದಿನ ಪ್ರಕರಣವಾದರೂ ಇಲ್ಲಿಯವರೆಗೆ ಸುಮ್ಮನಿದ್ದುದರಿಂದ ಪಾಲಿಕೆ ನ್ಯಾಯಾಂಗ ನಿಂದನೆಗೊಳಗಾವುವ ಪರಿಸ್ಥಿತಿ ಬಂದಿದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಯಾರೋ ಮಾಡಿದ ತಪ್ಪಿಗೆ ಸಾರ್ವಜನಿಕರ ಹಣ ಪೋಲು, ಸದಸ್ಯರ ಆಕ್ರೋಶ:
ಯಾರೋ ಮಾಡಿದ ತಪ್ಪಿಗೆ ಸಾರ್ವಜನಿಕರ ಹಣ ಪೋಲಾಗುವುದು ಬೇಡ. ಮೊದಲಿಗೆ 5 ಕೋಟಿ ರೂ. ಠೇವಣಿ ಇಟ್ಟು, ಕೋರ್ಟ್‌ಗೆ ಮನವಿ ಮಾಡಿ, ಪಾಲಿಕೆಯನ್ನು ಸದ್ಯಕ್ಕೆ ನ್ಯಾಯಾಂಗ ನಿಂದನೆಯಿಂದ ಪಾರು ಮಾಡಿಸೋಣ. 20 ಕೋಟಿ ರೂ. ಕೊಡುವುದು ಬೇಡ. ಆಡಳಿತ ಪಕ್ಷದವರು ಹಾಗೂ ಮೇಯರ್ ಕೂಡಿಕೊಂಡು ನಿರ್ಣಯ ಕೈಗೊಳ್ಳಬೇಕು ಎಂದು ಶಾಸಕ ಆಸೀಫ್ ಶೇಠ್ ತಿಳಿಸಿದರು. ಆಗ ಪಾಲಿಕೆ ಕಾನೂನು ಸಲಹೆಗಾರ ಮಹಾಂತಶೆಟ್ಟಿ, ಭೂ-ಸ್ವಾಧೀನ ಅಧಿಕಾರಿಯಾದ ಉಪವಿಭಾಗಾಧಿಕಾರಿಯು 2013ರ ಭೂ ಸ್ವಾಧೀನ ಕಾಯ್ದೆಯನ್ವಯ 20 ಕೋಟಿ ರೂ. ಅಂದಾಜು ಮೊತ್ತ ಠೇವಣಿ ಇಡುವಂತೆ ನಿರ್ದೇಶನ ನೀಡಿದ್ದಾರೆ. ಅಷ್ಟು ಮೊತ್ತ ಇಡದೆ ಹೋದರೆ ಮುಂದೆ ಪ್ರಕರಣ ಯಾವ ತಿರುವು ಪಡೆಯುತ್ತದೆ ಎಂದು ಹೇಳಲಿಕ್ಕೆ ಆಗದು ಎಂದರು. ಅದಕ್ಕೆ ಪಾಲಿಕೆ ಆಯುಕ್ತರು ಧ್ವನಿ ಗೂಡಿಸಿ, ಅಷ್ಟು ಮೊತ್ತ ಇಡದಿದ್ದರೆ ಕೋರ್ಟ್ ವಿಚಾರದಲ್ಲಿ ಪಾಲಿಕೆಗೆ ಧಕ್ಕೆ ಆಗಬಹುದು ಎಂದು ತಿಳಿಸಿದರು. ಕೆಲ ಹೊತ್ತು ಆಡಳಿತ ಹಾಗೂ ಪ್ರತಿಪಕ್ಷ ನಡುವೆ ಹಗ್ಗ-ಜಗ್ಗಾಟ ನಡೆಯಿತು. ವಿಪಕ್ಷ ಸದಸ್ಯರು ಎಷ್ಟು ಹಣ ಠೇವಣಿ ಇಡುತ್ತೀರಿ ಎಂದು ನಿರ್ಣಯ ಕೈಗೊಳ್ಳುವಂತೆ ಆಡಳಿತ ಪಕ್ಷ ಸದಸ್ಯರಿಗೆ ಹೇಳಿದರೆ, ಆಡಳಿತ ಪಕ್ಷದವರು ಮೇಯರ್ ಅವರ ಹೆಗಲಿಗೆ ಹಾಕಿದರು. ಮೇಯರ್ ಪಾಲಿಕೆ ಆಯುಕ್ತರ ಹೆಗಲಿಗೆ ಹೊರಸಿದರು. ಆಗ ಆಯುಕ್ತರು ನಾನೊಬ್ಬನೇ ನಿರ್ಣಯ ತೆಗೆದುಕೊಳ್ಳಲು ಆಗುವುದಿಲ್ಲ. ಎಲ್ಲರೂ ಒಮ್ಮತದಿಂದ ನಿರ್ಣ ಕೈಗೊಳ್ಳಿ ಎಂದರು. ಕೊನೆಗೆ ಮೇಯರ್ ಸವಿತಾ ಕಾಂಬಳೆ ಅವರು 20 ಕೋಟಿ ರೂ. ಠೇವಣಿ ಇಡುವುದಾಗಿ ವಿರೋಧ ಪಕ್ಷದ ಸದಸ್ಯರ ಆಕ್ಷೇಪದ ಮಧ್ಯೆಯೂ ನಿರ್ಣಯ ಕೈಗೊಂಡರು. ಆ.29ರಂದು ಪಾಲಿಕೆಯು ಉಪವಿಭಾಗಾಧಿಕಾರಿ ಎದುರು ವಿಚಾರಣೆಗೆ ಹಾಜರಾಗಲಿದ್ದು, 20 ಕೋಟಿ ರೂ. ಠೇವಣಿ ಇಡುವುದಾಗಿ ಒಪ್ಪಿಕೊಳ್ಳಬೇಕಿದೆ.
ಮಹಾನಗರ ಪಾಲಿಕೆ ದಿವಾಳಿ?:
ಮಹಾನಗರ ಪಾಲಿಕೆ ಖಾತೆಯಲ್ಲಿ ಸದ್ಯಕ್ಕೆ 39.92 ಕೋಟಿ ರೂ. ಸಂಗ್ರಹವಿದೆ. ಈ ಪೈಕಿ ಈಗಾಗಲೇ 9.20 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ. ಪ್ರತಿ ತಿಂಗಳು 8 ಕೋಟಿ ರೂ.ಗೂ ಹೆಚ್ಚು ಹಣ ಅಭಿವೃದ್ಧಿ ಕಾರ್ಯಗಳಿಗೆ ಬೇಕಾಗುತ್ತದೆ. ಆದರೆ, ಈಗಾಗಲೇ 20 ಕೋಟಿ ರೂ. ಭೂ-ಸ್ವಾಧೀನ ಪರಿಹಾರವಾಗಿ ನೀಡಿದರೆ ಪಾಲಿಕೆ ದಿವಾಳಿ ಆಗುತ್ತದೆ ಎಂದು ಪ್ರತಿಪಕ್ಷದವರು ಆಕ್ಷೇಪಿಸಿದರು. ಆಡಳಿತ ಪಕ್ಷದ ಸದಸ್ಯ ಹನುಮಂತ ಕೊಂಗಾಲಿ, ಗಿರೀಶ ಧೋಂಗಡಿ, ರವಿ ಧೋತ್ರೆ, ರಾಜಶೇಖರ ಡೋಣಿಯಾದಿಯಾಗಿ ಸದಸ್ಯರು, ಕಾಲಕಾಲಕ್ಕೆ ತೆರಿಗೆ ಸಂಗ್ರಹವಾಗುತ್ತದೆ. ಅಭಿವೃದ್ಧಿ ಕಾಮಗಾರಿಗೆ ತೊಂದರೆ ಆಗದಂತೆ ಕ್ರಮ ವಹಿಸಲಾಗುವುದು ಎಂದು ಸಮಜಾಯಿಸಿ ನೀಡಿದರು. ಒಂದು ಕಾಲಕ್ಕೆ ಬೆಳಗಾವಿ ಮಹಾನಗರ ಪಾಲಿಕೆ ಖಾತೆಯಲ್ಲಿ 400-500 ಕೋಟಿ ರೂ. ಹಣ ಸಂಗ್ರಹ ಇರುತ್ತಿತ್ತು. ಈಗ ಪಾಲಿಕೆ ಸ್ಥಿತಿ ಎಲ್ಲಿಗೆ ಬಂದಿದೆ ಎಂದು ಪ್ರತಿಪಕ್ಷದವರು ಪ್ರಶ್ನಿಸಿದರು.
ಆಡಳಿತ ಪಕ್ಷದವರ ನಿರ್ಣಯಕ್ಕೆ ನಮ್ಮ ಸಹಮತ ಇಲ್ಲ; ಶಾಸಕ ಆಸೀಫ್ ಸೇಠ್:
ಇಂತಹದ್ದೇ ಇನ್ನೂ 5 ಪ್ರಕರಣಗಳು ಇವೆ. ಅವುಗಳಿಗೆಲ್ಲ ಕೇಳಿದಷ್ಟು ಹಣ ಕೊಡುತ್ತ ಹೋದರೆ 150 ಕೋಟಿ ರೂ.ವರೆಗೆ ಹಣ ಬೇಕು. ಎಲ್ಲಿಂದ ಹೊಂದಿಸುವುದು? ನಾವು ಮನವಿ ಮಾಡಿದರೂ ಮೇಯರ್ ಅವರು ನಮ್ಮ ವಿರುದ್ಧ ನಿರ್ಣಯ ಕೈಗೊಂಡಿದ್ದಾರೆ. ಇದಕ್ಕೆ ನಮ್ಮ ಸಹಮತ ಇಲ್ಲ. ಈ ಪ್ರಕರಣದಲ್ಲಿ ತಪ್ಪು ಮಾಡಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದೇವೆ. ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು ಎಂದು ಶಾಸಕ ಆಸೀಫ್ ಸೇಠ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.