ಹುಬ್ಬಳ್ಳಿ: ಯಾವುದೇ ಕಂಪನಿಗಳಿರಲಿ ಗ್ರಾಹಕಸ್ನೇಹಿ ಆಗಿದ್ದರೆ ಮಾತ್ರ ಅಸ್ತಿತ್ವ ಕಂಡುಕೊಳ್ಳಲಿದೆ. ನಮ್ಮ ಸಂಸ್ಥೆ ಸ್ಥಾಪನೆಯಾಗಿ 106 ವರ್ಷವಾದರೂ ಜೀವಂತ ಇರುವುದಕ್ಕೆ ಇಂಥ ವಾತಾವರಣವೇ ಕಾರಣ ಎಂದು ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್‌ನ ಹಿರಿಯ ಪ್ರಬಂಧಕ ಸುಧೀಂದ್ರ ಇಂಡೀಕರ್ ಹೇಳಿದರು.
ನಗರದ ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ಕಚೇರಿಯಲ್ಲಿ ಕಂಪನಿಯ 106ನೇ ಸಂಸ್ಥಾಪನಾ ದಿನಾಚರಣಾ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಅಧೀನದ ಕಂಪನಿ ಇದು. ಬಹಳಷ್ಟು ಗ್ರಾಹಕರಿಗೆ ಆರೋಗ್ಯ ಸೇರಿದಂತೆ ಬಹುತೇಕ ಇನ್ಶೂರೆನ್ಸ್ ಯೋಜನೆಗಳನ್ನು ಪ್ರಕಟಿಸಿದೆ. ಹೊಸ ಯೋಜನೆಗಳನ್ನೂ ಪ್ರಕಟಿಸುತ್ತಿದೆ. ಇದಕ್ಕೆ ಕಾರಣ ನಮ್ಮ ಕಂಪನಿ ಮೇಲಿರುವ ಗ್ರಾಹಕರ ಪ್ರೀತಿ ಎಂದರು.
ಇದೇ ವೇಳೆ ಗ್ರೋಗ್ರೀನ್ ಪೆಡಲರ್ಸ್ ಅಧ್ಯಕ್ಷ ಬಾಲಚಂದ್ರ ಡಂಗನವರ ಅವರು ಹಿರಿಯ ಪ್ರಬಂಧಕ ಸುಧೀಂದ್ರ ಇಂಡೀಕರ್ ಅವರಿಗೆ ಸಸಿ ನೀಡಿ ಗೌರವಿಸಿದರು. 60ಕ್ಕೂ ಹೆಚ್ಚು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಆಡಳಿತಾಧಿಕಾರಿ ನೀರಜ್ ಕಾಳೆ, ಪ್ರಮುಖರಾದ ವಾಸುದೇವ ಬಂಕಾಪುರ, ಫಯಾಜ್ ಮೆಣಸಿನಕಾಯಿ, ನವೀನ ಪೆದ್ದಪಲ್ಲಿ, ಮೇಘರಾಜ ಪಾಟೀಲ ಉಪಸ್ಥಿತರಿದ್ದರು.