ಗುಂಡ್ಲುಪೇಟೆ: ಮೈಸೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ಜನಾಂದೋಲನ ಸಮಾವೇಶಕ್ಕೆ ಕಾಂಗ್ರೆಸ್ ಕಾರ್ಯಕರ್ತರನ್ನು ಕರೆದೊಯ್ಯಲು ಪಟ್ಟಣದ ಸಾರಿಗೆ ಡಿಪೋದಿಂದ 85 ಬಸ್‌ಗಳನ್ನು ನಿಯೋಜಿಸಿದ್ದರಿಂದ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಪರದಾಡಿದರು.
ಸಮಾವೇಶಕ್ಕೆ ತೆರಳುವ ಕಾರ್ಯಕರ್ತರನ್ನು ಕರೆದೊಯ್ಯಲು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಎರಡು ಬಸ್‌ಗಳನ್ನು ಬುಕ್ ಮಾಡಲಾಗಿತ್ತು. ಇದರಿಂದ ಗ್ರಾಮಾಂತರ ಪ್ರದೇಶಗಳು ಹಾಗೂ ಮೈಸೂರಿನತ್ತ ತೆರಳುವ ಬಸ್‌ಗಳ ಕೊರತೆಯುಂಟಾಗಿತ್ತು. ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಆಸ್ಪತ್ರೆಗಳಿಗೆ ಹೋಗುವ ರೋಗಿಗಳು ಹಾಗೂ ನಾನಾ ಕಡೆಗಳಿಗೆ ಕೆಲಸಕ್ಕೆ ಹೋಗುತ್ತಿದ್ದ ಉದ್ಯೋಗಿಗಳಿಗೆ ತೀವ್ರ ತೊಂದರೆಯಾಗಿತ್ತು. ಸಕಾಲದಲ್ಲಿ ಬಸ್ ಬರದ ಕಾರಣ ಆಟೋ ಹಾಗೂ ಬೈಕ್‌ಗಳ ಮೊರೆ ಹೋಗುವಂತಾಗಿತ್ತು. ಬಸ್ಸಿಗಾಗಿ ಕಾದುನಿಂತಿದ್ದ ಸಾವಿರಾರು ಜನರು ಹಾಗೂ ವಿದ್ಯಾರ್ಥಿಗಳು ಸಮಾವೇಶದ ಆಯೋಜಕರಿಗೆ ಹಿಡಿಶಾಪ ಹಾಕುತ್ತಿದ್ದರು.
ಈ ವೇಳೆ ಬಸ್ ನಿಲ್ದಾಣಕ್ಕೆ ಆಗಮಿಸಿದ ಕರುನಾಡು ಯುವ ಸೇನೆಯ ಅಧ್ಯಕ್ಷ ಮುನೀರ್ ಪಾಷಾ, ಸಾರಿಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಮಾವೇಶಕ್ಕೆ ಹೋಗುವವರಿಗೆ ಎಲ್ಲ ಬಸ್‌ಗಳನ್ನು ಕಳುಹಿಸಿದರೆ ಪ್ರತಿ ನಿತ್ಯವೂ ಸಂಚರಿಸುವ ಪ್ರಯಾಣಿಕರಿಗೆ ಉಳಿದ ಬಸ್‌ಗಳನ್ನು ಕಳುಹಿಸಿ ಎಂದು ಒತ್ತಾಯಿಸಿದ ನಂತರ ಮೈಸೂರಿಗೆ ಬಸ್‌ಗಳನ್ನು ಕಳುಹಿಸಲಾಯಿತು.