ಜಿಲ್ಲೆ

ಬೆಟ್ಟಹಳ್ಳಿ ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ

ರೇಷ್ಮೆ ನಗರ ಡೆಸ್ಕ್

 ಪಠ್ಯ, ಸಹಪಠ್ಯ ವಿಜೇತರಿಗೆ ಬಹುಮಾನ ವಿತರಣೆ

 ಕುದೂರು : ಬೆಟ್ಟಹಳ್ಳಿ ಕಾಲನಿ ಸರ್ಕಾರಿ ಶಾಲೆಯಲ್ಲಿ ಅರ್ಥಪೂರ್ಣವಾಗಿ ಮಂಗಳವಾರ ಸಮುದಾಯತ್ತ ಶಾಲಾ ಕಾರ್ಯಕ್ರಮವನ್ನು ಮಂಗಳವಾರ ನೆರವೇರಿಸಲಾಯಿತು.

ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಶಾಲೆಯ ಮುಂಭಾಗದಲ್ಲಿ ಸಮುದಾಯದತ್ತ ಶಾಲೆ ಹಾಗೂ ಸರ್ಕಾರಿ ಶಾಲಾ ಸೌಲಭ್ಯಗಳ ಬ್ಯಾನರ್‌ಗಳು ರಾರಾಜಿಸುತ್ತಿದ್ದವು. ಪಾಲಕರು ಶಾಲೆಗೆ ಆಗಮಿಸಿ ತಮ್ಮ ಮಕ್ಕಳ ಪ್ರಗತಿ ಬಗ್ಗೆ ಮಾಹಿತಿ ಪಡೆದು ಶಿಕ್ಷಕರೊಂದಿಗೆ ಚರ್ಚಿಸಿದರು.

ಮಾರ್ಗದರ್ಶಿ ಅಧಿಕಾರಿ ರಾಮಚಂದ್ರಯ್ಯ ಮಾತನಾಡಿ, ಬೆಟ್ಟಹಳ್ಳಿ ಕಾಲನಿ ಸರ್ಕಾರಿ ಶಾಲೆಯಲ್ಲಿ ನಡೆದ ಸಮುದಾಯದತ್ತ ಶಾಲಾ ಕಾರ್ಯಕ್ರಮವನ್ನು ಹಬ್ಬದಂತೆ ನೆರವೇರಿಸಲಾಯಿತು. ಇಲ್ಲಿನ ಪಾಲಕರ ಆಸಕ್ತಿ, ವಿದ್ಯಾರ್ಥಿಗಳ ವಿನಯ, ಕಲಿಕೆ, ಮುಖ್ಯ ಶಿಕ್ಷಕರ ಕ್ರಿಯಾಶೀಲತೆಗೆ ಹಿಡಿದ ಕನ್ನಡಿಯಂತಿದೆ ಎಂದರು.

ಮುಖ್ಯ ಶಿಕ್ಷಕ ರಘುಪತಿ ಮಾತನಾಡಿ, ಕಳೆದ 18 ವರ್ಷಗಳಿಂದಲೂ ನಮ್ಮ ಶಾಲೆಯಲ್ಲಿ ಒಂದಿಲ್ಲೊಂದು ವಿನೂತನ ವಿಶೇಷ ಕಾರ್ಯಕ್ರಮಗಳನ್ನು ಸಮುದಾಯದ ಸಹಭಾಗಿತ್ವದೊಂದಿಗೆ ನೆರವೇರಿಸುತ್ತಾ ಬರಲಾಗಿದೆ. ಇದರಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಕರು ಆಸಕ್ತಿಯ ಪಾಲು ಹೆಚ್ಚಿನದ್ದು ಎಂದರು.

ಸಮುದಾಯದ ಶಾಲಾ ಕಾರ್ಯಕ್ರಮದ ಅಂಗವಾಗಿ ಶಾಲೆಯಲ್ಲಿ ಹೋಳಿಗೆ ಊಟ ಉಣಬಡಿಸಲಾಯಿತು. ಸಿಹಿ ಊಟವನ್ನು ತಿಂದ ಮಕ್ಕಳು ಅನೇಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ಆಟ ಆಡಿ ನಲಿದರು. ಇದೇ ವೇಳೆ ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪಠ್ಯ ಹಾಗೂ ಸಹ ಪಠ್ಯದಲ್ಲಿ ವಿಶೇಷ ಸಾಧನೆ ತೋರಿದ ಪ್ರತೀ ವಿದ್ಯಾರ್ಥಿಗಳಿಗೂ ಬಹುಮಾನ ವಿತರಿಸುವ ಮೂಲಕ ಪ್ರೋತ್ಸಾಹಿಸಲಾಯಿತು.