ಮೈಸೂರು: ನಗರದ ಮಣಿಪಾಲ್ ಆಸ್ಪತ್ರೆಯಿಂದ ರುಮಾಟಾಲಜಿ ಮತ್ತು ಹಿರಿಯ ನಾಗರಿಕರ ಆರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಇತ್ತೀಚೆಗೆ ಸಮುದಾಯ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಯಸ್ಸಾದಂತೆ ನೋವು ಮತ್ತು ಜಡಯುಕ್ತ ದಿನಚರಿ ಅನಿವಾರ್ಯ ಎಂಬ ತಪ್ಪು ಕಲ್ಪನೆ ನಿವಾರಿಸುವುದು, ಸ್ವಯಂ ಪ್ರತಿರಕ್ಷಣಾ, ರುಮಾಟಾಲಜಿ ಸಂಬಂಧಿ ಸಮಸ್ಯೆಗಳ ಆರಂಭಿಕ ಪತ್ತೆ ಮತ್ತು ನಿರ್ವಹಣೆಯ ಮಹತ್ವವನ್ನು ತಿಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.
ಮಣಿಪಾಲ್ ಆಸ್ಪತ್ರೆಯ ಕನ್ಸಲ್ಟೆಂಟ್ ರುಮಾಟಾಲಜಿಸ್ಟ್ (ಕೀಲುರೋಗತಜ್ಞೆ) ಡಾ.ಕೆ.ಎನ್. ಸಂಗೀತಾ ಅವರು ಈ ಸಂವಾದದ ನೇತೃತ್ವ ವಹಿಸಿ, ಸಾಮಾನ್ಯವಾಗಿ ನಿರ್ಲಕ್ಷಿಸಲ್ಪಡುವ ಆಯಾಸ, ದೇಹದ ಜಡ, ನಿಶ್ಚಲ ಸ್ಥಿತಿ ಅಥವಾ ನೋವುಗಳಂತಹ ಸಮಸ್ಯೆಗಳ ಬಗ್ಗೆ ಉಪನ್ಯಾಸ ನೀಡಿದರು. ಆರಂಭಿಕ ರೋಗನಿರ್ಣಯ, ವೈಯಕ್ತಿಕ ಚಿಕಿತ್ಸೆ ಮತ್ತು ಬಹು-ವಿಭಾಗೀಯ ಆರೈಕೆಯಿಂದ ಹಿರಿಯ ನಾಗರಿಕರು ಚಲನಶೀಲ ಮತ್ತು ಹೆಚ್ಚು ಸ್ವಾವಲಂಬಿಗಳಾಗಿರಲು ಸಾಧ್ಯ ಎಂಬುದನ್ನು ಅವರು ತಿಳಿಸಿದರು.
ಚಲನೆಯ ಪ್ರಾಮುಖ್ಯತೆ ಕುರಿತು ತಿಳಿಸಿದ ಫಿಸಿಯೋಥೆರಪಿಸ್ಟ್ ಇಸ್ಮಾಯಿಲ್ ಅವರು, ಹಿರಿಯ ನಾಗರಿಕರು ಸುಲಭವಾಗಿ ಮಾಡಬಹುದಾದ ನಿಖರ ಫಲಿತಾಂಶ ನೀಡುವ ವ್ಯಾಯಾಮಗಳ ಪ್ರಾತ್ಯಕ್ಷಿಕೆಗಳನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ 110ಕ್ಕೂ ಹೆಚ್ಚು ಹಿರಿಯ ನಾಗರಿಕರು ಮತ್ತು ಅವರ ಆರೈಕೆದಾರರು ಸಕ್ರಿಯವಾಗಿ ಭಾಗವಹಿಸಿ ಆರೋಗ್ಯ ಸಂಬಂಧ ಚರ್ಚೆ ನಡೆಸಿದರು.