ಜಿಲ್ಲೆ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಮುದಾಯ ಆರೋಗ್ಯ ಅಧಿಕಾರಿಗಳ ಪ್ರತಿಭಟನೆ

ಮಡಿಕೇರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳು ಶುಕ್ರವಾರ ಡಿಎಚ್‌ಒ ಕಚೇರಿ ಎದುರು ಪ್ರತಿಭಟನೆ ನಡೆಸಿದರು.


ಈ ಸಂದರ್ಭದ ಮಾತನಾಡಿದ ಅಖಿಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ನೌಕರರ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಸಿ.ಕುಮಾರ್, ತಮ್ಮ ಕೆಲಸಕ್ಕೆ ಅಡ್ಡಿಯಾಗುವ ಕಿರುಕುಳಗಳನ್ನು ನಿಲ್ಲಿಸಬೇಕು. ಉದ್ದೇಶಪೂರ್ವಕವಾಗಿ ಗ್ರಾಮೀಣ ಸೇವೆಯಿಂದ ಡೈವರ್ಟ್ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರದ ಮಹತ್ವದ ಯೋಜನೆಯಲ್ಲಿ ದುಡಿಯುತ್ತಿರುವ ಪದವೀಧರ ಮತ್ತು ಪರಿಣಿತ ಆರೋಗ್ಯ ಅಧಿಕಾರಿಗಳನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.


ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಖಾಯಂಗೊಳಿಸಬೇಕು. ಮುಂಬಡ್ತಿಗೆ ಯೋಜನೆಯಲ್ಲಿ ಅವಕಾಶ ಕಲ್ಪಿಸಬೇಕು. ವೇತನವನ್ನು ಪರಿ?್ಕರಿಸಲು ಕ್ರಮ ಜರುಗಿಸಬೇಕು. ಈಗಿರುವ ಪ್ರೋತ್ಸಾಹ ಧನವನ್ನು ೮ ಸಾವಿರದಿಂದ ೧೫ ಸಾವಿರಕ್ಕೆ ಹೆಚ್ಚಿಸಬೇಕು. ಪ್ರಾಥಮಿಕ ಸಮಗ್ರ ೧೨ ಆರೋಗ್ಯ ಸೇವೆಗಳನ್ನು ನಿರ್ವಹಿಸಲು ಮುಕ್ತ ಅವಕಾಶ ಕೊಡಬೇಕು. ಕೂಡಲೇ ಕೋವಿಡ್-೧೯ ಎರಡು ಹಂತದ ಗಂಡಾಂತರ ಭತ್ಯೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.


ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ೨೦೧೬-೧೭ನೇ ಸಾಲಿನಿಂದ ಸಮುದಾಯ ಆರೋಗ್ಯ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಸಮಗ್ರ ೧೨ ಆರೋಗ್ಯ ಸೇವೆಗಳನ್ನು ಹೊರತುಪಡಿಸಿ ಇಲಾಖೆಯ ಬೇರೆ ಬೇರೆ ಕೆಲಸಗಳಲ್ಲಿ ದುಡಿಸಿಕೊಳ್ಳಲಾಗುತ್ತಿದೆ. ಆರೋಗ್ಯ ಕೇಂದ್ರದ ಸ್ವಚ್ಛತೆಯನ್ನು ಅಧಿಕಾರಿಗಳೇ ತಮ್ಮ ಸ್ವಂತ ಹಣ ಹಾಕಿ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಬೇರೆ ರಾಜ್ಯಗಳಲ್ಲಿ ೧೫ ಸಾವಿರ ರೂ ಪ್ರೋತ್ಸಾಹಧನ ಇದ್ದರೂ ಕೇವಲ ೮ ಸಾವಿರ ರೂ ಮಾತ್ರ ಕೊಡಲಾಗುತ್ತಿದೆ ಎಂದು ಪ್ರತಿಭಟನಾನಿರತರು ಡಿಎಚ್‌ಒ ಡಾ.ವೆಂಕಟೇಶ್ ಗಮನಕ್ಕೆ ತಂದರು. ಈ ಸಂದರ್ಭ ಆರ್‌ಸಿಎಚ್‌ಒ ಡಾ.ಗೋಪಿನಾಥ್, ಡಿಪಿಸಿ ಡಾ.ಶಾಂಭವಿ ಇದ್ದರು.

ಪ್ರತಿಭಟನೆಯಲ್ಲಿ ಘಟಕ ಉಪಾಧ್ಯಕ್ಷೆ ವಿ.ರಮ್ಯಾ, ಪ್ರಧಾನ ಕಾರ್ಯದರ್ಶಿಗಳಾದ ಎಸ್.ಆರ್.ದೀಪು, ಕೆ.ಪಿ.ಮಿಲನ್, ಸಹಕಾರ್ಯದರ್ಶಿ ಎ.ಯು.ವಿಕ್ರಂ, ಖಜಾಂಚಿಗಳಾದ ಎ.ಎಂ.ಪ್ರಿಯಾ ಸೇರಿದಂತೆ ಜಿಲ್ಲೆಯಾದ್ಯಂತ ಸೇವೆ ಸಲ್ಲಿಸುತ್ತಿರುವ ೧೩೦ ಸಮುದಾಯ ಆರೋಗ್ಯ ಅಧಿಕಾರಿಗಳು ಪಾಲ್ಗೊಂಡಿದ್ದರು.