ಅರಸೀಕೆರೆ ಗ್ರಾಮಾಂತರ: ಮನುಷ್ಯನಲ್ಲಿನ ಸ್ವಾರ್ಥದ ಚಿಂತನೆಗಳಿಂದ ಮಾನವೀಯ ಮೌಲ್ಯಗಳನ್ನು ಮರೆತು ವೈಭೋಗದ ಜೀವನಕ್ಕೆ ಮಾರುಹೋಗುತ್ತಿರುವ ಕಾರಣ ದೇವರು, ಧರ್ಮ ಹಾಗೂ ಧಾರ್ಮಿಕ ಶ್ರದಾ ್ಧಕೇಂದ್ರಗಳ ಬಗ್ಗೆ ಆಸಕ್ತಿ ಕಡಿಮೆ ಆಗುತ್ತಿರುವುದು ನೋವಿನ ಸಂಗತಿ ಎಂದು ಮಾಡಾಳು ನಿರಂಜನ ಪೀಠದ ಶ್ರೀ ರುದ್ರಮುನಿ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿ ಪನ್ನಸಮುದ್ರ ಗ್ರಾಮದಲ್ಲಿ ಸೋಮವಾರ ಶ್ರೀಬೊಮ್ಮಲಿಂಗೇಶ್ವರ ಸ್ವಾಮಿಗೆ ಬೆಳ್ಳಿಯ ಕವಚಧಾರಣೆ ಹಾಗೂ ನೂತನ ಸಮುದಾಯ ಭವನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಆಧುನಿಕತೆ ಜೀವನಶೈಲಿಗೆ ಮಾರು ಹೋಗಿರುವ ಮನುಷ್ಯ, ಮಾನವೀಯತೆ ಮೌಲ್ಯಗಳನ್ನು ಮರೆಯುತ್ತಿದ್ದಾನೆ ಎಂದರು.
ಶಾಸಕ ಕೆ.ಎಂ ಶಿವಲಿಂಗೇಗೌಡ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಮ್ಮ ಸನಾತನ ಧರ್ಮ ಮತ್ತು ಸಂಸ್ಕೃತಿ, ಆಚಾರ, ವಿಚಾರಗಳು ಅತ್ಯಂತ ಮಹತ್ವ ಪೂರ್ಣವಾಗಿದ್ದು, ಯಾರು ಭಗವಂತನನ್ನು ಕಂಡವರಿಲ್ಲ. ಆದರೂ ನಂಬಿಕೆಯೇ ಮೂಲಧಾರವಾಗಿದ್ದು, ಶ್ರೀಬೊಮ್ಮಲಿಂಗೇಶ್ವರ ಸ್ವಾಮಿಗೆ ಬೆಳ್ಳಿಯ ಕವಚ ಧಾರಣೆ ಮಾಡಿರುವುದನ್ನು ದರ್ಶನ ಮಾಡಿದರೆ ಕೈಲಾಸದಲ್ಲಿನ ಪರಶಿವನನ್ನು ಕಂಡಂತಹ ಅನುಭವ ಭಕ್ತರ ಮನಸ್ಸಿನಲ್ಲಿ ಮೂಡುತ್ತದೆ ಎಂದರು.
ಆಧುನಿಕ ಜೀವನಕ್ಕೆ ಮಾರು ಹೋಗುತ್ತಿರುವ ಕಾರಣ ಮಠಮಾನ್ಯಗಳು ಹಾಗೂ ಧಾರ್ಮಿಕ ಶ್ರದ್ಧಾಕೇಂದ್ರಗಳ ಬಗ್ಗೆ ಭಯಭಕ್ತಿ ಇಲ್ಲದಾಗಿದೆ. ದೇವಸ್ಥಾನಕ್ಕೆ ಬಂದಾಗ ಭಕ್ತರಂತೆ ನಟಿಸುವುದು, ಹೊರಗೆ ಹೋದ ಬಳಿಯಥಾಸ್ಥಿತಿ ಭ್ರಷ್ಟಾಚಾರ ನಡೆಸುವುದು ಸರಿಯಲ್ಲ. ದೇವರಲ್ಲಿ ನನಗೆ ಹಣ, ಶ್ರೀಮಂತಿಕೆ, ಆಯುಷ್, ಆರೋಗ್ಯವನ್ನು ಕರುಣಿಸಲೆಂದು ಬೇಡಿಕೊಳ್ಳುವ ಜನರು, ಸಮಾಜಕ್ಕೆ ಯಾವುದೇ ರೀತಿಯಲ್ಲಿ ಸೇವೆಯನ್ನು ಮಾಡುವ ಶಕ್ತಿಯನ್ನು ಕರುಣಿಸು ಎಂದು ಪ್ರಾರ್ಥಿಸಿಕೊಳ್ಳಬೇಕು ಎಂದು ಹೇಳಿದರು.
ಬಸವ ಮರುಳಸಿದ್ದ ಸ್ವಾಮೀಜಿ, ಪನ್ನಸಮುದ್ರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಭಾಗವಹಿಸಿದ್ದರು.