ಗೋಣಿಕೊಪ್ಪ: ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದೊಂದಿಗೆ ಸಮುದಾಯ ಶಿಕ್ಷಣ ಅತ್ಯಂತ ಅವಶ್ಯವಾಗಿದ್ದು, ಅದನ್ನು ಎನ್‌ಎಸ್‌ಎಸ್ ಕಲಿಸುತ್ತದೆ ಎಂದು ಕೊಡಗು ಜಿಲ್ಲಾ ಎನ್‌ಎಸ್‌ಎಸ್ ನೋಡಲ್ ಅಧಿಕಾರಿ ವನಿತ್ ಕುಮಾರ್ ಅಭಿಪ್ರಾಯಪಟ್ಟರು.
ಪೊನ್ನಂಪೇಟೆ ಸಮೀಪದ ಹಳಿಗಟ್ಟು ಸರ್ಕಾರಿ ಹಿರಿಯ ಪಾಠಶಾಲೆಯಲ್ಲಿ ಆಯೋಜಿಸಿದ್ದ ಹಳಿಗಟ್ಟು ಸಿಐಟಿ ಇಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ಸಮುದಾಯ ಶಿಕ್ಷಣದಿಂದ ವಿದ್ಯಾರ್ಥಿಗಳು ದೂರವಾಗುತ್ತಿದ್ದಾರೆ. ಮೊಬೈಲ್, ಕಂಪ್ಯೂಟರ್ ಹಿಡಿದು ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಸಮುದಾಯದ ಜನರೊಂದಿಗೆ ಹೇಗೆ ಮಾತನಾಡಬೇಕು, ಮಾನವೀಯತೆಯನ್ನು ಹೇಗೆ ರೂಪಿಸಿಕೊಳ್ಳಬೇಕು, ಕೃಷಿ ಚಟುವಟಿಕೆ ತೊಡಗಿಕೊಳ್ಳುವುದು ಹೇಗೆ?, ಜನರ ಕಷ್ಟಗಳನ್ನು ಅರಿತು ಹೇಗೆ ಸಮಸ್ಯೆ ಬಗೆಹರಿಸಬೇಕು ಎಂಬುದನ್ನು ತಿಳಿಯಲು ಎನ್‌ಎಸ್‌ಎಸ್ ಶಿಬಿರ ಸಹಕಾರಿಯಾಗಿದೆ ಎಂದರು.
ಮಹಾತ್ಮ ಗಾಂಧಿ ಅವರ 100ನೇ ಜನ್ಮ ದಿನದಂದು ಪಾರಂಭವಾದ ಈ ಯೋಜನೆ 6 ಲಕ್ಷಕ್ಕೂ ಹೆಚ್ಚು ಸ್ವಯಂ ಸೇವಕರನ್ನು ಹೊಂದಿ ಶಿಸ್ತು, ಸಮಯ ಪ್ರಜ್ಞೆ, ನಾಯಕತ್ವದ ಗುಣಗಳನ್ನು ಬೆಳೆಸಲು ಶಿಬಿರಗಳು ಸಹಕಾರಿಯಾಗಿವೆ ಎಂದು ತಿಳಿಸಿದರು.
ಸಿಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಬಸವರಾಜ್ ಮಾತನಾಡಿ, ನೀವು ಬಯಸುವ ಬದಲಾವಣೆ ನೀವೇ ಆಗಬೇಕು, ಗಾಂಧೀಜಿಯ ಕನಸು ನನಸು ಮಾಡಲು ಯುವಜನರು ಮುಂದಾಗಬೇಕು. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಮೂಲಕ ನಿಮ್ಮ ಜೀವನವನ್ನು ಅರ್ಥಪೂರ್ಣವಾಗಿಸಿಕೊಳ್ಳಬೇಕು. ಎನ್‌ಎಸ್‌ಎಸ್ ನಿಮ್ಮ ವ್ಯಕ್ತಿತ್ವ ಪರಿಪೂರ್ಣವಾಗುವಂತೆ ಮಾಡುತ್ತದೆ. ಅದರ ಸದುಪಯೋಗ ನಿಮ್ಮಿಂದ ಆಗಬೇಕಾಗಿದೆ ಎಂದು ತಿಳಿಸಿದರು.
ಅರುವತೋಕ್ಲು ಗ್ರಾಪಂ ಉಪಾಧ್ಯಕ್ಷ ಮನೆಯಪಂಡ ಪ್ರಾಣ್ ಬೋಪಣ್ಣ, ಅರುವತೋಕ್ಲು ಪಿಡಿಒ ಶಂಕರನಾರಾಯಣ, ಮುಖ್ಯಶಿಕ್ಷಕಿ ಕಾವೇರಿ, ಎಸ್‌ಡಿಎಂಸಿ ಅಧ್ಯಕ್ಷೆ ಜೆ.ಎಂ.ನಿಷ್ಮಾ, ಉಪಾಧ್ಯಕ್ಷ ಪೊನ್ನು, ರಾಜ್ಯ ಪ್ರಶಸ್ತಿ ಕೃಷಿಕ ಬಿ.ಪಿ.ರವಿಶಂಕರ್, ಸಿಐಟಿ ಕ್ಯಾಂಪಸ್ ನಿರ್ವಾಹಕ ಜೀವನ್ ಚಿನ್ನಪ್ಪ, ಎನ್‌ಎಸ್‌ಎಸ್ ಅಧಿಕಾರಿಯಾದ ಎನ್.ಪವನ್‌ಕುಮಾರ್, ಕಾಲೇಜಿನ ಎಲ್ಲ ವಿಭಾಗದ ಮುಖ್ಯಸ್ಥರು ಹಾಗೂ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.