ಜಿಲ್ಲೆ

ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲಿ: ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಆಗ್ರಹ

ಮಂಡ್ಯ: ಮಳವಳ್ಳಿ ತಾಲೂಕು ಟಿ.ಕಾಗೇಪುರ ಗ್ರಾಮದ ವಸತಿ ಶಾಲೆಯಲ್ಲಿ ಮೇಘಾಲಯ ಮೂಲದ ಇಬ್ಬರು ಮಕ್ಕಳ ಸಾವಿನ ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಆಗ್ರಹಿಸಿದರು.

ಮಕ್ಕಳ ಸಾವು ಸೈದ್ಧಾಂತಿಕ ಸಂಚಿನ ಲವಾಗಿದ್ದು, ಕರ್ನಾಟದಲ್ಲಿ ಈ ರೀತಿ ಈಶಾನ್ಯ ರಾಜ್ಯದಿಂದ ನೂರಾರೂ ಮಕ್ಕಳಿದ್ದಾರೆ. ವಿವಿಧ ವಸತಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಾಹಿತಿ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈಶಾನ್ಯ ರಾಜ್ಯದಿಂದ ಕರೆತರುವ ಮಕ್ಕಳನ್ನು ವಸತಿ ವ್ಯವಸ್ಥೆಯೇ ಇಲ್ಲದ ಶಾಲೆಗಳಲ್ಲಿ ಕಲಿಯುವಂತೆ ಮಾಡಲಾಗಿದೆ. ಈ ಮಕ್ಕಳಿಗೆ ಸೈದ್ಧಾಂತಿಕ ಮತ್ತು ದೊಣ್ಣೆ ಹಾಗೂ ಕತ್ತಿ ವರಸೆಯಂತಹ ಶಸಾಭ್ಯಾಸ ತರಬೇತಿ ನೀಡಲಾಗುತ್ತಿದೆ. ಈಗ ಸಾವಿಗೀಡಾದ ಮಕ್ಕಳು ಕಿರುಗಾವಲು ಶಾಲೆಯಲ್ಲಿ ದಾಖಲಾತಿ ಹೊಂದಿ ಟಿ.ಕಾಗೇಪುರದ ಗೋಕುಲದಲ್ಲಿ ತರಬೇತಿ ಪಡೆಯುತ್ತಿದ್ದರು. ಗ್ರಾಮಗಳಲ್ಲಿ ನಡೆದ ಕಾರ್ಯಕ್ರಮದ ಉಳಿದ ಊಟ ಇವರಿಗೆ ನೀಡಲಾಗುತ್ತಿತ್ತು. ಇವರನ್ನು ತೋರಿಸಿ ದಾನಿಗಳು ಮತ್ತು ಕಾರ್ಪೋರೇಟ್ ಸಂಸ್ಥೆದಿಂದ ಹಣ ಸಂಗ್ರಹಿಸುವ ಹುನ್ನಾರ ಇರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದರು.

ಇಂತಹ ಮಕ್ಕಳನ್ನು ಕರೆತರುವ ಜಾಲದ ಹಿಂದೆ ಆರ್‌ಎಸ್‌ಎಸ್ ಸಂಘಟನೆಯ ಕೈವಾಡವಿರುವ ಸಾಧ್ಯತೆಗಳಿದ್ದು, ಮಕ್ಕಳ ಸಾಗಾಣೆ ಮಾಡುವ ಅಂತಾರಾಜ್ಯ ಜಾಲವೂ ಇದರಲ್ಲಿ ಕೂಡಿಕೊಂಡಿರುವುದಾಗಿ ಕಾಣುತ್ತಿದೆ. ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂದಿಸಿದಂತೆ ಗೋಕುಲ ಸಂಸ್ಥೆಯ ಮುಖ್ಯಸ್ಥ ಲಂಕೇಶ್ ಅವರನ್ನು ಮೊದಲ ಆರೋಪಿಯಾಗಿ ಮಾಡಿ, ಮಕ್ಕಳ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಮೃತ ಮಕ್ಕಳ ಕುಟುಂಬಕ್ಕೆ ಸರ್ಕಾರ ತಲಾ 25 ಲಕ್ಷ ರೂ ಪರಿಹಾರ ನೀಡಬೇಕು. ಈ ಪರಿಹಾರವನ್ನು ಲಂಕೇಶ್‌ನಿಂದಲೇ ವಸೂಲಿ ಮಾಡಬೇಕು ಎಂದು ಆಗ್ರಹಿಸಿದರು.

ಸದಸ್ಯರಾದ ಎನ್.ಎಲ್.ಭರತ್‌ರಾಜ್, ಸಿ.ಕುಮಾರಿ, ಸುಶೀಲಾ, ಹನುಮೇಶ್ ಇದ್ದರು.