ವಿಜಯವಾಣಿ ಸುದ್ದಿಜಾಲ ಧಾರವಾಡ
ವೈದ್ಯಕಿಯ ಶಿಕ್ಷಕರು ಉತ್ತಮ ಜ್ಞಾನ ಮತ್ತು ಸಂವಹನ ಕೌಶಲ ಹೊಂದಿರಬೇಕು. ವಿದ್ಯಾರ್ಥಿಗಳನ್ನು ಸ್ವತಂತ್ರರಾಗುವಂತೆ ರೂಪಿಸುವುದು ಉತ್ತಮ ತೃಪ್ತಿ ನೀಡುತ್ತದೆ ಎಂದು ಎಸ್ಡಿಎಂ ವಿವಿ ಉಪ ಕುಲಪತಿ ಡಾ. ನಿರಂಜನ್ ಕುಮಾರ ಹೇಳಿದರು.
ಎಸ್ಡಿಎಂ ವೈದ್ಯಕಿಯ ಮಹಾವಿದ್ಯಾಲಯದ ವೈದ್ಯಕಿಯ ಶಿಕ್ಷಣ ಘಟಕವು ರಾಷ್ಟ್ರೀಯ ವೈದ್ಯಕಿಯ ಆಯೋಗದ ಪ್ರಾಂತೀಯ ನೋಡಲ್ ಕೇಂದ್ರ, ಬೆಳಗಾವಿಯ ಜೆಎನ್ಎಂಸಿ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪಠ್ಯಕ್ರಮ ಅನುಷ್ಠಾನ ಬೆಂಬಲ ಕಾರ್ಯಕ್ರಮ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪ್ರೀತಿ ಮತ್ತು ಉತ್ಸಾಹದಿಂದ ಬೋಧಿಸುತ್ತಾ ಉತ್ತಮ ಶಿಕ್ಷಕರಾಗಬೇಕು. ಶಿಕ್ಷಣವು ವೃತ್ತಿಪರತೆ ಮತ್ತು ಜೀವನದ ಕಲೆ ಕಲಿಸುತ್ತದೆ. ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಯಲ್ಲಿ ವಿಮರ್ಶಾತ್ಮಕ ಚಿಂತನೆ ಅಗತ್ಯ. ಶಿಕ್ಷಣದ ಜ್ಞಾನ ಹಂಚಿಕೊಳ್ಳಲು ಸಹಯೋಗ ಮತ್ತು ಸಹಕಾರ ಅಗತ್ಯ. ಉತ್ತಮ ಶಿಕ್ಷಣವು ವ್ಯಕ್ತಿಯ ಬುದ್ಧಿವಂತಿಕೆಯನ್ನು ಜಾಗೃತಗೊಳಿಸುತ್ತದೆ ಎಂದರು.
ಎಸ್ಡಿಎಂ ವಿಶ್ವ ವಿದ್ಯಾಲಯದ ಕುಲಸಚಿವ ಡಾ. ಚಿದೇಂದ್ರ ಶೆಟ್ಟರ, ಎನ್ಎಂಸಿ ಪ್ರಾಂತೀಯ ನೋಡಲ್ ಕೇಂದ್ರದ ಸಂಯೋಜಕಿ ಡಾ. ಸುನಿತಾ ಪಾಟೀಲ, ಎಸ್ಡಿಎಂ ವೈದ್ಯಕಿಯ ಕಾಲೇಜಿನ ಉಪ ಪ್ರಾಂಶುಪಾಲ ಡಾ. ದೀಪಕ ಕನಬೂರ, ಡಾ. ರಾಧಿಕಾ ಶೇರಖಾನ್, ಇತರರು ಇದ್ದರು.
ಡಾ. ಅರ್ಚನಾ ಡಂಬಳ ಸ್ವಾಗತಿಸಿದರು. ಡಾ. ಸ್ಮೀತಾ ಪ್ರಭು ನಿರೂಪಿಸಿದರು. ಡಾ. ಸ್ನೇಹಾ ವಂದಿಸಿದರು.