ಮಂಡ್ಯ: ಜಾತಿ, ಧರ್ಮ, ಜನಾಂಗ ಮತ್ತು ಪ್ರದೇಶದ ಶ್ರೇಷ್ಟತೆಯಿಂದ ಬಳಲುತ್ತಾ ತಮ್ಮೊಳಗೆ ಹಿಂಸೆಯನ್ನು ಬೆಳೆಸಿಕೊಳ್ಳುತ್ತಿರುವುದು ಅಪಾಯಕಾರಿ ಬೆಳವಣಿಗೆ. ಈ ಹಿನ್ನೆಲೆಯಲ್ಲಿ ಸಮಾಧಾನ ಮತ್ತು ಸಮಾನತೆ ಕಡೆಗೆ ಸಾಗಬೇಕಾದ ಅನಿವಾರ್ಯತೆ ಇದೆ ಎಂದು ಉಪನ್ಯಾಸಕ ಕೆ.ಪಿ.ಮೃತ್ಯುಂಜಯ ಆಶಿಸಿದರು.
ತಾಲೂಕಿನ ಬೇಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮೈ ಭಾರತ್, ನೆಹರು ಯುವಕೇಂದ್ರ, ಭಾರತ ಸೇವಾದಳ ಸರ್ಕಾರಿ ಪ್ರೌಢಶಾಲೆ ಬೇಲೂರು ವತಿಯಿಂದ ಆಯೋಜಿಸಿದ್ದ ಕೋಮು ಏಕತಾ ದಿವಸ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮಲ್ಲಿ ಜಾತಿ-ಜಾತಿಗಳ ನಡುವೆ ದೇಶ-ದೇಶಗಳ ನಡುವೆ ಹಿಂಸೆಯ ಮತ್ತು ಅಸಹನೆಯ ಮನೋಭಾವ ಹೆಚ್ಚಾಗುತ್ತಿರುವುದರಿಂದ ಯುದ್ಧದಂತಹ ಸನ್ನಿವೇಶ ಸೃಷ್ಟಿಯಾಗುತ್ತಿವೆ. ಪರಿಣಾಮ ನಮ್ಮನ್ನು ನಾವೇ ನಾಶಮಾಡಿಕೊಳ್ಳುವ ವಿನಾಶದ ಕಡೆಗೆ ಸಾಗುತ್ತಿದ್ದೇವೆ. ಈ ಹಂತದಲ್ಲಿ ಎಚ್ಚೆತ್ತುಕೊಂಡು ಪರಸ್ಪರ ಪ್ರೀತಿಯನ್ನು ಹಂಚಿಕೊಳ್ಳುತ್ತಾ ಅಹಿಂಸಾ ಮಾರ್ಗದಲ್ಲಿ ಸಾಗಬೇಕಾದ ಅನಿವಾರ್ಯತೆ ಇದೆ ಎಂದು ಪ್ರತಿಪಾದಿಸಿದರು.
ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್.ನಾರಾಯಣ್ ಮಾತನಾಡಿ, ಮಹನೀಯರು ಎಲ್ಲ ವರ್ಗದ ಜನರನ್ನು ಒಂದುಗೂಡಿಸಲು ಪ್ರಯತ್ನಿಸಿದರೆ ರಾಜಕೀಯ ವ್ಯಕ್ತಿಗಳು ಮತ ಹಾಕಿಸಿಕೊಳ್ಳಲು ಕೋಮುಗಳನ್ನು ಸೃಷ್ಟಿಸುತ್ತಾರೆ ಎಂದರು.
ಮುಖ್ಯ ಶಿಕ್ಷಕಿ ಶಿವಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣ, ನೆಹರು ಯುವ ಕೇಂದ್ರ ಲೆಕ್ಕ ಮತ್ತು ಕಾರ್ಯಕ್ರಮ ಸಹಾಯಕ ಸಿ.ರವಿಚಂದ್ರನ್, ಸೇವಾದಳದ ಜಿಲ್ಲಾ ಸಂಘಟಕ ಸಿ.ಎಸ್.ಗಣೇಶ್, ದೈಹಿಕ ಶಿಕ್ಷಣ ಶಿಕ್ಷಕಿ ಉಷಾರಾಣಿ ಇದ್ದರು.