ಜಿಲ್ಲೆ

ಕಾಂಗ್ರೆಸ್​ನಿಂದ ಕೋಮುವಾದ ಬೆಂಬಲಿಸುವ ಕೆಲಸ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಯೋತ್ಪಾದನೆ ಮತ್ತು ಕೋಮುವಾದ ಒಂದೇ ನಾಣ್ಯದ ಎರಡು ಮುಖ. ಇದನ್ನು ಬೇರು ಸಹಿತ ಕಿತ್ತು ಹಾಕುವ ಪ್ರಯತ್ನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಡುತ್ತಿದ್ದಾರೆ. ಆದರೆ ಇದನ್ನು ಪ್ರೋತ್ಸಾಹಿಸುವ ಕೆಲಸವನ್ನು ಕಾಂಗ್ರೆಸ್​ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದ ಮೇಲೆ ಹಿಂದು ಸಮಾಜದ ಜನರ ಮೇಲೆ ಹಲ್ಲೆ ಮಾಡುವುದು ಸಾಮಾನ್ಯವಾಗಿದೆ. ಜೈ ಶ್ರೀರಾಮ ಅನ್ನುವವರ ಮೇಲೆ, ಹನುಮಾನ ಚಾಲೀಸ್​ ಹಾಕಿದ್ದಕ್ಕೆ ಹೀಗೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಲಾಗಿದೆ. ಹಲ್ಲೆ ಮಾಡಿದವರ ಮೇಲೆ ಪ್ರಕರಣ ಸಹ ದಾಖಲಾಗುತ್ತಿಲ್ಲ ಎಂದು ದೂರಿದರು.
ಹಳೇ ಹುಬ್ಬಳ್ಳಿ ಪೊಲೀಸ್​ ಠಾಣೆ ಎದುರು ಪಿಎಫ್​ಐ, ಎಸ್​ಡಿಪಿಐ ಜತೆಗೂಡಿ ಗಲಾಟೆ ಮಾಡಿದ್ದರು. ದಂಗೆಯಲ್ಲಿ ಬಂಧನವಾದವರ ಬಿಡುಗಡೆಗೆ ನಿಂತಿದ್ದರು. ದಲಿತ ಸಮುದಾಯಕ್ಕೆ ಸೇರಿದ ಅಖಂಡ ಶ್ರೀನಿವಾಸ ಮನೆ ಮೇಲೆ ದಾಳಿ ಆಗಿತ್ತು. ಆ ಆರೋಪಿಗಳನ್ನೂ ಬಿಡುಗಡೆ ಮಾಡಿಸಿದರು. ಪಾಕಿಸ್ತಾನ್​ ಜಿಂದಾಬಾದ್​ ಅಂದಾಗಲೂ ಅಂದಿಲ್ಲ ಎಂದು ವಾದಿಸಿದ ಕಾಂಗ್ರೆಸ್​ ನಾಯಕರು, ಕೊನೆಗೆ ಒಬ್ಬರನ್ನು ಬಂಧಿಸಿದರು. ದಿನೇ ದಿನೇ ಕೊಲೆ, ಗಲಭೆ ನಡೆಯುತ್ತಲೇ ಇವೆ. ನಮ್ಮ ಪರ ಸರ್ಕಾರ ಇದೆ ಎಂಬ ಮನೋಭಾವ ಅಪರಾಧಿಗಳಿಗೆ ಬಂದಿದೆ. ಈ ರೀತಿಯ ಪ್ರವೃತ್ತಿಯಿಂದ ನಮ್ಮ ಸಂಸತಿ ಮೇಲೆ ಪ್ರಹಾರ ನಡೆದಿದೆ ಎಂದರು.
ತಮ್ಮ ಚಿಹ್ನೆಯ ಧ್ವಜದಲ್ಲಿ ಕೇಸರಿ ಇದೆ ಎಂದು ರಾಹುಲ್​ ಗಾಂಧಿ ಅದನ್ನು ಬಿಟ್ಟಿದ್ದಾರೆ. ತಮ್ಮ ಧ್ವಜ ಬಿಟ್ಟು, ಮುಸ್ಲಿಂ ಲೀಗ್​ನ ಹಸಿರು ಧ್ವಜ ಹಿಡಿದು ನಾಮಪತ್ರ ಸಲ್ಲಿಸಲು ಹೋಗಿದ್ದಾರೆ. ತಮ್ಮ ಧ್ವಜ, ಚಿಹ್ನೆಯನ್ನೇ ಕೈ ಬಿಟ್ಟಿದ್ದಾರೆ. ಇದೊಂದು ದುರಂತ ಎಂದು ವ್ಯಂಗ್ಯವಾಡಿದರು.