ಜಿಲ್ಲೆ

ಕೋಮುಲ್​ ಕಟ್ಟಡ ರೈತರ ಆಸ್ತಿ

ಬೇತಮಂಗಲ : ಬಂಗಾರಪೇಟೆಯಲ್ಲಿ 2 ವರ್ಷದ ಹಿಂದೆಯೇ ನಿರ್ಮಿಸಿರುವ ಸುಸಜ್ಜಿತ ಹಾಲು ಒಕ್ಕೂಟದ ಶಿಬಿರದ ಕಟ್ಟಡ ಕೆಜಿಎಫ್​ ಮತ್ತು ಬಂಗಾರಪೇಟೆ ಎರಡೂ ಕ್ಷೇತ್ರಗಳ ರೈತರ ಆಸ್ತಿಯಾಗಿದೆ, ಈ ಬಗ್ಗೆ ಒಕ್ಕೂಟದಲ್ಲಿ ದಾಖಲೆ ಇವೆ ಎಂದು ಕೋಮುಲ್​ ನಿರ್ದೇಶಕ ಜಯಸಿಂಹ ಕೃಷ್ಣಪ್ಪ ಹೇಳಿದರು.

ದೊಡ್ಡ ಕಾರಿಯಲ್ಲಿರುವ ತೋಟದ ಮನೆಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ನಿರ್ದೇಶಕ ಎಸ್​.ಎನ್​.ನಾರಾಯಣಸ್ವಾಮಿ ಕಟ್ಟಡ ಬಂಗಾರಪೇಟೆ ಕ್ಷೇತ್ರದಲ್ಲಿದೆ. ಕೆಜಿಎಫ್​ನವರು ಅಲ್ಲಿಯೇ ಮತ್ತೊಂದು ಕಟ್ಟಡ ಕಟ್ಟಿಕೊಳ್ಳಲಿ ಎಂದು ಹೇಳಿದ್ದಾರೆ. ಅವರು ನಿರ್ದೇಶಕರಾಗುವ ಮುಂಚೆಯೇ ಅಲ್ಲಿ ಕಟ್ಟಡ ನಿಮಾರ್ಣವಾಗಿದೆ. ನಾನೂ ಸೇರಿ ಅಧಿಕಾರಿಗಳು, ಸಿಬ್ಬಂದಿ 2 ವರ್ಷದಿಂದ ಅಲ್ಲಿಂದಲೇ ಕಾರ್ಯ ನಿರ್ವಹಿಸುತ್ತಿದ್ದೇವೆ. ಈಗ ಬದಲಾಯಿಸಲು ಸಾಧ್ಯವಿಲ್ಲ ಎಂದರು.

ಸಂಸ್ಥೆ ನಿರ್ವಹಣೆಗೆ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಬಂಗಾರಪೇಟೆಯಲ್ಲಿ ಸುಸಜ್ಜಿತ ಕಟ್ಟಡ ಕಟ್ಟಿದ್ದೇವೆ. ಆಗ ನಾನೊಬ್ಬನೇ ನಿರ್ದೇಶಕನಾಗಿದ್ದರಿಂದ ನನಗೆ ಕೊಠಡಿ ನೀಡಲಾಗಿತ್ತು. ಆದರೆ ನೂತನವಾಗಿ ಆಯ್ಕೆಯಾದ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ನಾನು ಕಾರ್ಯ ನಿರ್ವಹಿಸುತ್ತಿರುವ ಕೊಠಡಿ ನೀಡುವಂತೆ ಅಧಿಕಾರಿಗಳಿಗೆ ಒತ್ತಡ ಹಾಕುತ್ತಿದ್ದಾರೆ. ಒಕ್ಕೂಟದ ಕಾನೂನಿನ ನಿಯಮ ಗಾಳಿಗೆ ತೂರುವಂತೆ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಸೋಲಾರ್​ ಘಟಕದಿಂದ ಉಳಿತಾಯ : ನಾರಾಯಣಸ್ವಾಮಿ ಹಾಲು ಒಕ್ಕೂಟಕ್ಕೆ ಬರುವ ಮುಂಚೆಯಿಂದಲೂ ಸೋಲಾರ್​ ಘಟಕ ನಿಮಾರ್ಣದಲ್ಲಿ ಅವ್ಯವಹಾರ ನಡೆದಿದೆ ಎಂದು ಅಪಪ್ರಚಾರ ಮಾಡುತ್ತಲೇ ಇದ್ದಾರೆ. ಅದನ್ನು ನಿರ್ದೇಶಕರಾದ ನಂತರವೂ ಬಿಟ್ಟಿಲ್ಲ. ಈ ಮೊದಲು ಮಾಸಿಕ ಸುಮಾರು 1 ಕೋಟಿಗೂ ಅಧಿಕ ವಿದ್ಯುತ್​ ಬಿಲ್​ ಬರುತ್ತಿತ್ತು. ಆದರೆ ಸೋಲಾರ್​ ಘಟಕ ಪ್ರಾರಂಭವಾದ ನಂತರ ಪ್ರತಿ ತಿಂಗಳು 1 ಕೋಟಿ ರೂ. ಉಳಿತಾಯ ಆಗುತ್ತಿದೆ. ಇದನ್ನು ನಾರಾಯಣಸ್ವಾಮಿ ತಿಳಿದುಕೊಳ್ಳದೆ ವಿನಾಕಾರಣ ಆರೋಪ ಮಾಡಿ, ರೈತರ ಸಂಸ್ಥೆಗೆ ಅಗೌರವ ಉಂಟು ಮಾಡುತ್ತಿದ್ದಾರೆ ಎಂದು ಜಯಸಿಂಹಕೃಷ್ಣಪ್ಪ ಗುಡುಗಿದರು.

ಕುರ್ಚಿ ಬಿಡಲು ತಯಾರಿಲ್ಲ! : ಈ ಹಿಂದೆ ನಿರ್ದೇಶಕರಾಗಿದ್ದವರು ಎಲ್ಲಿ ಕಾರ್ಯ ನಿರ್ವಹಿಸಿದ್ದಾರೂ ಅಲ್ಲೇ ಇರಲಿ. ಹೊಸ ನಿರ್ದೇಶಕರಿಗೆ ಮತ್ತೊಂದು ಕಡೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಆಡಳಿತ ಮಂಡಳಿ ಸಭೆಯಲ್ಲಿ ತೀಮಾರ್ನಿಸಿದೆ. ಅದರಂತೆ ಎಲ್ಲ ತಾಲೂಕಿನ ಹೊಸ ನಿರ್ದೇಶಕರು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ, ನಾರಾಯಣಸ್ವಾಮಿ ಮಾತ್ರ ನನಗೆ ಕೊಟ್ಟ ಕೊಠಡಿಯೇ ಬೇಕು ಎಂದು ಒತ್ತಡ ಹಾಕುತ್ತಿದ್ದಾರೆ. ನಾನು ಕುಳಿತಿರುವ ಕುರ್ಚಿ ಬಿಟ್ಟು ಏಕೆ ಹೋಗಬೇಕು ಎಂದು ಜಯಸಿಂಹ ಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿದರು. 35 ವರ್ಷಗಳಿಂದ ಅವಿಭಜಿತ ಬಂಗಾರಪೇಟೆ, ಕೆಜಿಎಫ್​ ತಾಲೂಕು ಸೊಸೈಟಿಗೆ ನಾನು ನಿರ್ದೇಶಕನಾಗಿದ್ದೆಈಗ ನಾರಾಯಣಸ್ವಾಮಿ ನಿರ್ದೇಶಕರಾಗಿದ್ದಾರೆ. ಹಾಗಾಗಿ ಅವರು ನಮ್ಮ ಕಚೇರಿಯಲ್ಲಿ ಕೊಠಡಿ ಇಟ್ಟು ಕೊಳ್ಳಲಿ ಎಂದರು.