ಮಂಗಳೂರು: ಕರ್ಣಾಟಕ ಬ್ಯಾಂಕ್ ವತಿಯಿಂದ ನ್ಯಾಷನಲ್ ಕಾಮನ್ ಮೊಬಿಲಿಟಿ ಡೆಬಿಟ್ ಕಾರ್ಡ್ (ಎನ್‌ಸಿಎಂಸಿ) ಎನ್ನುವ ವಿನೂತನವಾದ ದೇಶೀಯ ಡೆಬಿಡ್ ಕಾರ್ಡ್ ಸೋಮವಾರ ಬಿಡುಗಡೆಗೊಂಡಿದೆ.
ಪ್ರಪಂಚದಾದ್ಯಂತ ಬಳಸಬಹುದಾದ ಸ್ಪರ್ಶ ರಹಿತ, ಡೆಬಿಟ್ ಯಾ ಪ್ರಿಪೇಯ್ಡಿ ಕಾರ್ಡ್ ಇದಾಗಿದೆ. ಒಂದು ದೇಶ, ಒಂದು ಕಾರ್ಡ್ ಎನ್ನುವ ಧ್ಯೇಯವಾಕ್ಯಕ್ಕೆ ಪೂರಕವಾಗಿ ರೂಪುಗೊಂಡಿರುವ ಈ ಕಾರ್ಡ್ ಹಲವು ವಿಶೇಷ ಸೌಲಭ್ಯ ಹೊಂದಿದೆ.
ಸ್ಪರ್ಶ ರಹಿತವಾದ ಈ ಕಾರ್ಡ್ ಪಾಸ್ ಮಷಿನ್‌ಗಳಲ್ಲಿ ಸ್ವೈಪ್ ಮಾಡದೆ ಬಳಸಬಹುದು. ಟೋಲ್ ಪ್ಲಾಜಾ, ಮೆಟ್ರೋ ಸ್ಟೇಷನ್, ಪಾರ್ಕಿಂಗ್ ಜಾಗಗಳಲ್ಲಿ, ಮಳಿಗೆಗಳಲ್ಲಿ ಬಳಸಬಹುದು. ಚಿಪ್ ಆಧಾರಿತ ಈ ಕಾರ್ಡ್ ಬಳಸಿ ಇಂಟರ್ನೆಟ್ ಬಳಕೆ ಇಲ್ಲದೆಯೇ (ಆಫ್‌ಲೈನ್ ಪೇಮೆಂಟ್) ಸಣ್ಣಪುಟ್ಟ ವ್ಯವಹಾರ ಮಾಡಬಹುದು. ದೇಶೀಯ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳನ್ನು ಕೂಡ ಈ ಕಾರ್ಡ್ ಬಳಸಿ ಎಟಿಎಂ, ಪೋಸ್ ಮಷಿನ್ ಅಥವಾ ಇ-ಕಾಮರ್ಸ್ ಮುಖಾಂತರ ಮಾಡಬಹುದು.
ಡಿಜಿಟಲೀಕರಣಕ್ಕೆ ಪೂರಕ: ಒಂದು ದೇಶ, ಒಂದು ಕಾರ್ಡ್ ಎನ್ನುವ ಧ್ಯೇಯವಾಕ್ಯಕ್ಕೆ ಬದ್ಧರಾಗಿ ರಾಷ್ಟ್ರೀಯ ಅಭಿಮಾನ ಬಿಂಬಿಸುವ ರುಪೇ ಎನ್‌ಸಿಎಂಸಿ ಕಾರ್ಡ್ ಬಿಡುಗಡೆ ಮಾಡುವುದು ಕರ್ಣಾಟಕ ಬ್ಯಾಂಕ್‌ಗೆ ಹೆಮ್ಮೆಯ ವಿಷಯವಾಗಿದೆ ಎಂದು ಕಾರ್ಡ್ ಬಿಡುಗಡೆ ಮಾಡಿದ ಕರ್ಣಾಟಕ ಬ್ಯಾಂಕ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್. ಹೇಳಿದರು.
ಸ್ಪರ್ಶ ರಹಿತ ವ್ಯವಹಾರಗಳಿಗೆ ಅನುಕೂಲವಾಗಿರುವ ಈ ಕಾರ್ಡ್ ಕರ್ಣಾಟಕ ಬ್ಯಾಂಕಿನ ಗ್ರಾಹಕರಿಗೆ ಇನ್ನೊಂದು ವಿನೂತನ ಕೊಡುಗೆಯಾಗಿದೆ. ಇದು ಬದಲಾಗುತ್ತಿರುವ ಬ್ಯಾಂಕಿಂಗ್ ಪರಿಭಾಷೆಗೆ ಪೂರಕವಾಗಿದೆ. ಈ ಕಾರ್ಡ್‌ನ ಸೌಲಭ್ಯಗಳಾದ ಟ್ಯಾಪ್ ಆಂಡ್ ಗೋ, ಆಫ್‌ಲೈನ್ ಪೇಮೆಂಟ್‌ನಂತಹ ಸೌಲಭ್ಯಗಳು ಜನರಿಗೆ ಆಕರ್ಷಕವಾಗಿದ್ದು, ಸಣ್ಣಪುಟ್ಟ ವ್ಯವಹಾರಗಳನ್ನು ಮಾಡಲು ಅನುಕೂಲ ಒದಗಿಸಲಿವೆ. ಇಂತಹ ನೂತನ ಉಪಕ್ರಮಗಳು ಬ್ಯಾಂಕಿಂಗ್ ವ್ಯವಹಾರದ ಪರಿಪೂರ್ಣ ಡಿಜಿಟಲೀಕರಣಕ್ಕೆ ಪೂರಕವಾಗಲಿದೆ ಎಂದರು.