ಬೆಂಗಳೂರು: ಬಿಎಂಟಿಸಿ ಬಸ್ ಮತ್ತು ಮೆಟ್ರೋ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ಈಗಾಗಲೆ ಜಾರಿಗೊಳ್ಳಬೇಕಿದ್ದ ಕಾಮನ್ ಮೊಬಿಲಿಟಿ ಕಾರ್ಡ್ ವ್ಯವಸ್ಥೆ ಅನುಷ್ಠಾನ ಮತ್ತಷ್ಟು ವಿಳಂಬವಾಗಲಿದೆ. ದೇಶಾದ್ಯಂತ ಸಾರಿಗೆ ವ್ಯವಸ್ಥೆಯಲ್ಲಿ ಏಕರೂಪದ ಟಿಕೆಟ್ ವ್ಯವಸ್ಥೆ ಜಾರಿಗೆ ತರುವ ಕುರಿತು ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ. ಅದಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಈಗಾಗಲೆ ಆ ವ್ಯವಸ್ಥೆ ಜಾರಿಗೆ ತರಲಾಗಿದೆ. ಅದೇ ಮಾದರಿಯನ್ನು ಬೆಂಗಳೂರಿನಲ್ಲೂ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದ್ದು, ಅದರಂತೆ ಬಿಎಂಟಿಸಿ ಬಸ್ ಮತ್ತು ನಮ್ಮ ಮೆಟ್ರೋ ರೈಲು ಪ್ರಯಾಣ ಶುಲ್ಕ ಪಾವತಿಗೆ ಒಂದೇ ಮಾದರಿಯ ಕಾರ್ಡ್ ಬಳಕೆ ವ್ಯವಸ್ಥೆ ಜಾರಿಗೊಳ್ಳಲಿದೆ.
ಈ ವ್ಯವಸ್ಥೆ 2020ರ ಆರಂಭದಲ್ಲಿಯೇ ಅನುಷ್ಠಾನಗೊಳ್ಳಬೇಕಿತ್ತು. ಆದರೆ, ಆದರೆ, ಮೆಟ್ರೋ ನಿಲ್ದಾಣಗಳಲ್ಲಿ ಆಟೋಮ್ಯಾಟಿಕ್ ಶುಲ್ಕ ವಸೂಲಿ ಗೇಟ್ (ಎಎ್ಸಿ) ಅಳವಡಿಯಲ್ಲಾದ ವಿಳಂಬ, ಬಿಎಂಟಿಸಿಯ ನಿರ್ಲಕ್ಷ$್ಯ, ಕರೊನಾ ಸೋಂಕಿನ ಕಾರಣದಿಂದಾಗಿ ಯೋಜನೆ ಜಾರಿಯಾಗಿಲ್ಲ. ಇದೀಗ ಬಿಎಂಟಿಸಿ ವ್ಯವಸ್ಥೆ ಜಾರಿಗೆ ಮುಂದಾಗಿದ್ದು, ಆಟೋಮ್ಯಾಟಿಕ್ ಟಿಕೆಟ್ ಶುಲ್ಕ ವಸೂಲಿ ವ್ಯವಸ್ಥೆ ಜಾರಿಗೊಳಿಸುವ ಬ್ಯಾಂಕ್ಗಳ ನೇಮಕಕ್ಕೆ ನಿರ್ಧರಿಸಿದೆ. ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಜತೆಗೆ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರಗಳನ್ನು ಹೊಸದಾಗಿ ಖರೀದಿಸಲು ನಿರ್ಧರಿಸಲಾಗಿದೆ. ಈ ಎಲ್ಲ ಪ್ರಕ್ರಿಯೆ ರ್ಪೂಣಗೊಂಡು ಯೋಜನೆ ಜಾರಿಗೊಳ್ಳಲು ಇನ್ನೂ 8 ತಿಂಗಳು ಬೇಕಾಗಲಿದೆ.
ಎರಡೂ ಹಂತದಲ್ಲಿ ಜಾರಿ: ಬಿಎಂಆರ್ಸಿಎಲ್ ನಿರ್ಧರಿಸಿದಂತೆ ನಮ್ಮ ಮೆಟ್ರೋ ಮೊದಲ ಮತ್ತು ಎರಡನೇ ಹಂತದಲ್ಲಿ ಏಕಕಾಲಕ್ಕೆ ಯೋಜನೆ ಜಾರಿಗೊಳಿಸಲಾಗುತ್ತದೆ. ಈಗಾಗಲೆ ರೈಲು ಕಾರ್ಯಾಚರಣೆಗೊಂಡಿರುವ ಮೊದಲ ಹಂತದ 40 ನಿಲ್ದಾಣಗಳ ಜತೆಗೆ ಎರಡನೇ ಹಂತದ 62 ನಿಲ್ದಾಣಗಳ ಪೈಕಿ 44 ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ. ಅದಕ್ಕೆ ಸಂಬಂಧಿಸಿದಂತೆ ಕಾಮನ್ ಮೊಬಿಲಿಟಿ ಕಾರ್ಡ್ಗಳ ಪೂರೈಕೆಗೆ ಸ್ಟೇಟ್ ಬ್ಯಾಂಕ್ ಆ್ ಇಂಡಿಯಾಗೆ ವಹಿಸುವ ಕುರಿತು ಚರ್ಚೆಗಳು ನಡೆದಿವೆ.
ಬಿಇಎಲ್ನಿಂದ ಯಂತ್ರ ಪೂರೈಕೆ: ನಿಲ್ದಾಣಗಳಲ್ಲಿನ ಟಿಕೆಟ್ ಶುಲ್ಕ ಕಡಿತ ದ್ವಾರದಲ್ಲಿ ಆ ಯಂತ್ರ ಅಳವಡಿಸಲಾಗುತ್ತದೆ. ಅದಕ್ಕೆ ಸಂಬಂಧಿಸಿದಂತೆ ಕಾಮನ್ ಮೊಬಿಲಿಟಿ ಕಾರ್ಡ್ನಿಂದ ಆಟೋಮ್ಯಾಟಿಕ್ ಟಿಕೆಟ್ ಶುಲ್ಕ ವಸೂಲಿ ಯಂತ್ರಗಳ ಪೂರೈಕೆ ಹೊಣೆಯನ್ನು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ಗೆ ವಹಿಸಲಾಗಿದೆ. ಬೈಯ್ಯಪ್ಪನಹಳ್ಳಿಯಲ್ಲಿ ಪ್ರಾಯೋಗಿಕವಾಗಿ 2 ಗೇಟ್ ಅಳವಡಿಸಲಾಗಿದೆಯಾದರೂ, ಅದು ಇನ್ನೂ ಕಾರ್ಯಾರಂಭ ಮಾಡಿಲ್ಲ. ಅದೇ ಮಾದರಿಯ ಗೇಟ್ಗಳನ್ನು ಸದ್ಯದಲ್ಲೇ ಉದ್ಘಾಟನೆಗೊಳ್ಳಲಿರುವ ಯಲಚೇನಹಳ್ಳಿಯಿಂದ ಅಂಜನಾಪುರ ಟೌನ್ಶಿಪ್ವರೆಗಿನ ಮಾರ್ಗದಲ್ಲೂ ಅಳವಡಿಸಲಾಗಿದೆ.
ಬಿಎಂಆರ್ಸಿಎಲ್ ನಿರ್ವಹಣೆ: ಕಾಮನ್ ಮೊಬಿಲಿಟಿ ಕಾರ್ಡ್ ವ್ಯವಸ್ಥೆ ಜಾರಿ ಕುರಿತಂತೆ ಬಿಎಂಆರ್ಸಿಎಲ್ ಮತ್ತು ಬಿಎಂಟಿಸಿ ಅಧಿಕಾರಿಗಳು ಈಗಾಗಲೆ ಹಲವು ಬಾರಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ತೀರ್ಮಾನವಾದಂತೆ ಕಾರ್ಡ್ಗಳ ವಿತರಣೆ ಮತ್ತು ನಿರ್ವಹಣೆಯ ಹೊಣೆ ಬಿಎಂಆರ್ಸಿಎಲ್ದ್ದಾಗಿದೆ.