ಬೆಳಗಾವಿ: ಬೀದಿ ನಾಯಿಗಳ ಹಾವಳಿಗೆ ಸಂಪೂರ್ಣ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮೇಲ್ವಿಚಾರಣೆ ಸಮಿತಿ ರಚನೆಗೆ ಕ್ರಮ ವಹಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳಿಗೆ ಬೇಕಾಬಿಟ್ಟಿ ಆಹಾರ ನೀಡುವುದನ್ನು ನಿಷೇಧಿಸಲು ನಿರ್ಧರಿಸಿದೆ.
ಬೀದಿ ನಾಯಿಗಳ ಉಪಟಳ ನಿಯಂತ್ರಿಸುವ ಕುರಿತು ಸುಪ್ರೀಂ ಕೋರ್ಟ್ ಹೊರಡಿಸಿರುವ ಆದೇಶದ ಬೆನ್ನಲ್ಲೆ ಪ್ರಾಣಿಗಳ ಸಂತಾನ ನಿಯಂತ್ರಣಕ್ಕೆ ಮತ್ತು ರೇಬಿಸ್ ವಿರೋಧಿ ಲಸಿಕೆ (ಎಬಿಸಿ, ಎಆರ್ವಿ) ಮೇಲ್ವಿಚಾರಣೆ ಮತ್ತು ಅನುಷ್ಠಾನ ಸಮಿತಿ ರಚಿಸಲು ಆಯಾ ಸ್ಥಳಿಯ ಸಂಸ್ಥೆಗಳಿಗೆ ಸರ್ಕಾರ ನಿರ್ದೇಶನ ನೀಡಿದೆ.
ಪಶುಸಂಗೋಪನೆ ಇಲಾಖೆ ಮಾಹಿತಿ ಪ್ರಕಾರ ಬೆಳಗಾವಿ ಮಹಾನಗರ, ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಂದಾಜು 40 ಸಾವಿರ ಹಾಗೂ ಗ್ರಾಪಂಗಳ ವ್ಯಾಪ್ತಿಯಲ್ಲಿ 25 ಸಾವಿರಕ್ಕೂ ಅಧಿಕ ಬೀದಿ ನಾಯಿಗಳಿದ್ದು, ಇವುಗಳ ನಿಯಂತ್ರಣ ಸವಾಲಾಗಿದೆ.
ಆದೇಶದಲ್ಲೆನಿದೆ?: ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತಕ್ಷಣದಿಂದಲೇ ಬೀದಿ ನಾಯಿಗಳ ಸಮೀಕ್ಷೆ ಕೈಗೊಳ್ಳಬೇಕು. ಪ್ರತಿ 3 ವರ್ಷಕ್ಕೊಮ್ಮೆ ಗಣತಿ ನಡೆಸಬೇಕು. ಭಾರತೀಯ ಕಲ್ಯಾಣ ಮಂಡಳಿಯಿಂದ ಮಾನ್ಯತೆ ಪಡೆದ ಏಜೆನ್ಸಿಗಳಿಗೆ ಮಾತ್ರ ಎಬಿಸಿ ಮತ್ತು ಎಆರ್ವಿ ಅನುಷ್ಠಾನಗೊಳಿಸಲು ಜವಾಬ್ದಾರಿ ವಹಿಸಬೇಕು. ನಾಯಿಗಳನ್ನು ಹಿಡಿದ ಬಳಿಕ ಸ್ಟೆರಿಲೈಸೇಶನ್, ಡಿ.ವಾರ್ಮಿಂಗ್ ಮತ್ತು ಲಸಿಕೆ ನೀಡಿದ ನಂತರ ಅದೇ ಪ್ರದೇಶಕ್ಕೆ ಬಿಡಬೇಕು. ಅಕ್ರಮಣಕಾರಿ ಮತ್ತು ರೇಬಿಸ್ನಿಂದ ಬಳಲುತ್ತಿರುವ ನಾಯಿಗಳನ್ನು ಆಶ್ರಯ ಕೇಂದ್ರಗಳಲ್ಲಿರಿಸಬೇಕು. ನಿರ್ವಹಣೆ ಮತ್ತು ಸಾರ್ವಜನಿಕರ ದೂರುಗಳು, ನಿಯಮ ಉಲ್ಲಂನೆ ದೂರು ಸ್ವೀಕರಿಸಲು ಸಹಾಯವಾಣಿ ಸ್ಥಾಪಿಸಬೇಕು. ಬೀದಿ ನಾಯಿಗಳ ಕಡಿತಕ್ಕೆ ಒಳಗಾಗಿರುವ ನಾಗರಿಕರಿಗೆ ಚಿಕಿತ್ಸಾ ವೆಚ್ಚ, ಮರಣ ಸಂಭವಿಸಿದರೆ ಪರಿಹಾರ ನೀಡಲು ಕ್ರಮ ವಹಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ನೀಡಬಾರದು. ಹೀಗೆ ವಿವಿಧ ಷರತ್ತು ವಿಧಿಸಿ ಸಮತಿ ರಚಿಸಲು ಸರ್ಕಾರ ಆದೇಶ ಹೊರಡಿಸಿದೆ.