ವಿಜಯಪುರ : ಭಾರತದಲ್ಲಿ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿನೆನಪಿಗಾಗಿ ಸರ್ಕಾರವು ಅಮೃತ ಗ್ರಾಮ ಪಂಚಾಯತಿ ಯೋಜನೆ ಜಾರಿ ತಂದಿದೆ. ಈ ಯೋಜನೆ ಸಮರ್ಪಕ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿ ಮಾತನಾಡಿದರು.
ಮೊದಲನೇ ಹಂತದಲ್ಲಿ ಆಯ್ಕೆಯಾದ ಅಮೃತ ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿಗಳ ಕುರಿತಂತೆ ಸಭೆಯಲ್ಲಿ ಚರ್ಚಿಸಿ, ವಿವಿಧ ತಾಲೂಕುಗಳ ಸಹಾಯಕ ನಿರ್ದೇಶಕರು ಮತ್ತು ಅಮೃತ ಗ್ರಾಮ ಪಂಚಾಯತಿ ಯೋಜನೆಯಡಿ ಆಯ್ಕೆಯಾದ ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಎಲ್ಲ ತಾಲೂಕುಗಳ ತಾಂತ್ರಿಕ ಸಂಯೋಜಕರಿಗೆ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಿರ್ದೇಶನ ನೀಡಿದರು.
ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಆ. 14ರೊಳಗೆ ಮುಕ್ತಾಯಗೊಳಿಸಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಮೃತ ಗ್ರಾಪಂ ಯೋಜನೆಯಡಿ ಜಿಲ್ಲೆಗೆ ಸರ್ಕಾರದಿಂದ 3.25 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಕಾಮಗಾರಿಗಳ ಮುಕ್ತಾಯ ವರದಿ ಸಲ್ಲಿಸುವ ಗ್ರಾಮ ಪಂಚಾಯಿತಿಗಳಿಗೆ ಪ್ರಥಮ ಆದ್ಯತೆಯ ಮೇರೆಗೆ 12.50 ಲಕ್ಷ ರೂ.ಗಳ ಅನುದಾನ ಬಿಡುಗಡೆಗೊಳಿಸಲಾಗುತ್ತದೆ ಎಂದು ತಿಳಿಸಿದರು.
2022-23ನೇ ಸಾಲಿನಲ್ಲಿ ಎರಡನೇ ಹಂತದ ಅಮೃತ ಗ್ರಾಪಂ ಯೋಜನೆಯಡಿ 27 ಗ್ರಾಪಂಗಳನ್ನು ಆಯ್ಕೆ ಮಾಡಲಾಗಿದ್ದು, ಯೋಜನೆಯ ಉದ್ದೇಶ, ಕೈಗೊಳ್ಳಬೇಕಾದ ಕಾಮಗಾರಿಗಳು, ಅನುದಾನದ ಲಭ್ಯತೆ ಹಾಗೂ ರಾಜ್ಯಕ್ಕೆ ಮಾದರಿ ಗ್ರಾಮ ಪಂಚಾಯಿತಿಗಳನ್ನಾಗಿ ಮಾಡಲು ಶ್ರಮ ವಹಿಸಬೇಕೆಂದು ಸೂಚಿಸಿದರು.
ಎರಡನೇ ಹಂತದ ಅಮೃತ ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ತುರ್ತಾಗಿ ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಲು ಸೂಚಿಸಿದರು. ಕ್ರಿಯಾ ಯೋಜನೆ ಅನುಮೋದನೆಗೊಂಡ ಮೇಲೆ ನಿಗದಿತ ಸಮಯದಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ತಿಳಿಸಿದರು.
ಜಿಲ್ಲೆಯ ಆಯ್ದ 26 ಅಮೃತ ಗ್ರಾಮ ಪಂಚಾಯಿತಿಗಳಲ್ಲಿ ಬೀದಿ ದೀಪಗಳು, ಸರ್ಕಾರಿ ಶಾಲೆ ಹಾಗೂ ಅಂಗನವಾಡಿಗಳಿಗೆ ಕಾಂಪೌಂಡ್, ಶೌಚಗೃಹ ಹಾಗೂ ಪೌಷ್ಠಿಕ ತೋಟಗಳನ್ನು ನಿರ್ಮಾಣ ಮಾಡುವುದು, ಪ್ರತಿ ಮನೆಗೆ ಕುಡಿಯುವ ನೀರಿನ ಸರಬರಾಜು, ಶೇ.100 ರಷ್ಟು ಘನ ತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ, ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ವಿಸರ್ಜಿಸುವುದು, ಸೌರ ವಿದ್ಯುತ್ ಅಳವಡಿಕೆ, ಡಿಜಿಟಲ್ ಗ್ರಂಥಾಲಯಗಳೊಂದಿಗೆ ಸುಸಜ್ಜಿತವಾಗಿ ಶಾಲೆಗಳನ್ನು ಸ್ಥಾಪಿಸುವುದು ಹಾಗೂ ಅಮೃತ ಉದ್ಯಾನವನ ನಿರ್ಮಾಣ ಹಾಗೂ ಸ್ಮಶಾನ ಅಭಿವೃದ್ಧಿಗೂ ಒತ್ತು ಕೊಟ್ಟು ಸಮಗ್ರ ಮೂಲ ಸೌಕರ್ಯ ಅಭಿವೃದ್ಧಿ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಜಿಪಂ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ, ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ, ಜಿಪಂ ವಿಷಯ ನಿರ್ವಾಹಕ ಅರವಿಂದ ಜಾಧವ ಇತರರು ಉಪಸ್ಥಿತರಿದ್ದರು.