ಮದ್ದೂರು ಪಟ್ಟಣದ ಎಪಿಎಂಸಿ ಮಾರುಕಟ್ಟೆಗೆ ಸಚಿವ ಶಿವಾನಂದ ಎಸ್. ಪಟೇಲ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆ.ಎಂ.ಉದಯ್ ಇದ್ದರು. 
ಜಿಲ್ಲೆ

ನೂತನ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಬದ್ಧ

ಮದ್ದೂರು: ಮೈಷುಗರ್ ಸಕ್ಕರೆ ಕಾರ್ಖಾನೆ ಪುನಶ್ಚೇತನ ಜತೆಗೆ ನೂತನ ಕಾರ್ಖಾನೆ ಸ್ಥಾಪನೆಗೆ ಸರ್ಕಾರ ಬದ್ಧವಾಗಿದೆ. ರಾಜ್ಯದ 172 ಎಪಿಎಂಸಿಗಳನ್ನು ಉನ್ನತೀಕರಿಸಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಸಕ್ಕರೆ ಮತ್ತು ಜವಳಿ ಸಚಿವ ಶಿವಾನಂದ ಎಸ್. ಪಟೇಲ್ ಹೇಳಿದರು.
ಪಟ್ಟಣದ ಎಪಿಎಂಸಿ ಮಾರುಕಟ್ಟೆಗೆ ಸೋಮವಾರ ದಿಢೀರ್ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದ 3 ರಾಜ್ಯಗಳಲ್ಲಿ ಈ ಹಿಂದೆ ಕೇಂದ್ರ ಸರ್ಕಾರ ಹಿಂಪಡೆದಿದ್ದ ಎಪಿಎಂಸಿ ಕಾಯ್ದೆಯನ್ನು ಮರುಸ್ಥಾಪಿಸಿ ಮುಚ್ಚುವ ಹಂತದಲ್ಲಿದ್ದ ಸಂಸ್ಥೆಗೆ ಮರುಜೀವ ನೀಡಲಾಗಿದೆ. 180 ಕೋಟಿ ರೂ.ಗೆ ಕುಸಿದಿದ್ದ ಎಪಿಎಂಸಿ ವಾರ್ಷಿಕ ಆದಾಯವನ್ನು ಕಳೆದ 3 ತಿಂಗಳಲ್ಲಿ ಹೆಚ್ಚಿಸಿದ್ದು ಪ್ರಸಕ್ತ ವರ್ಷ 180 ರಿಂದ 350 ಕೋಟಿ ರೂ. ಆದಾಯ ನಿರೀಕ್ಷೆ ಹೊಂದಿರುವುದಾಗಿ ಹೇಳಿದರು.
ಮದ್ದೂರು ಎಪಿಎಂಸಿ ಅಭಿವೃದ್ಧಿ ಮತ್ತು ಸಿಬ್ಬಂದಿ ಕೊರತೆ ನೀಗಿಸಲು ಮುಂದಿನ ಒಂದು ವಾರದೊಳಗೆ ಕ್ರಮವಹಿಸುವುದಾಗಿ ತಿಳಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಮೈಷುಗರ್ ನೂತನ ಕಾರ್ಖಾನೆ ಮತ್ತು ಡಿಸ್ಟಿಲರಿ ಘಟಕ ಚಾಲನೆ, ವಿದ್ಯುತ್ ಘಟಕ, ಮರುಆರಂಭಕ್ಕೆ ಒತ್ತು ನೀಡಲು ಸರ್ಕಾರ ಅಗತ್ಯ ಅನುದಾನ ಬಿಡುಗಡೆಗೆ ಈಗಾಗಲೇ ನಿರ್ಧರಿಸಿದೆ ಎಂದರು. ಶಾಸಕ ಕೆ.ಎಂ.ಉದಯ್, ಎಪಿಎಂಸಿ ಜಿಲ್ಲಾ ಉಪನಿರ್ದೇಶಕಿ ರೇವತಿಬಾಯಿ, ಕಾರ್ಯದರ್ಶಿ ಆರ್.ಲತಾಕುಮಾರಿ, ಸಹ ಕಾರ್ಯದರ್ಶಿ ಶಿವಕುಮಾರ್ ಇದ್ದರು.