ಮಡಿಕೇರಿ: ಗ್ರಾಮೀಣ ಜನತೆಗೆ ಉತ್ತಮ ಚಿಕಿತ್ಸೆ ನೀಡುವಲ್ಲಿ ಅನೇಕ ದಶಕಗಳಿಂದ ನಿಟ್ಟೆ ವಿಶ್ವವಿದ್ಯಾನಿಲಯದ ಎಬಿ ಶೆಟ್ಟಿ ಸ್ಮಾರಕ ಆಸ್ಪತ್ರೆಗಳು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದು, ಬಡರೋಗಿಗಳಿಗೆ ಬಹುತೇಕ ಚಿಕಿತ್ಸೆಯನ್ನು ಉಚಿತವಾಗಿ ಕಲ್ಪಿಸಲಾಗುತ್ತಿದೆ ಎಂದು ವೈದ್ಯಕೀಯ ಕಾಲೇಜಿನ ದಂತ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ.ಚೇತನ ಹೆಗಡೆ ಹೇಳಿದರು.
ನಗರದ ಅಶ್ವಿನಿ ಆಸ್ಪತ್ರೆಯಲ್ಲಿ ನಿಟ್ಟೆ ವಿವಿ ಆಶ್ರಯದಲ್ಲಿ ಮಂಗಳೂರಿನ ಎಬಿ ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಕಾಲೇಜಿನ ವತಿಯಿಂದ ಭಾನುವಾರ ಆಯೋಜಿತವಾಗಿದ್ದ ಉಚಿತ ದಂತ ಜೋಡಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಹಿರಿಯ ನಾಗರಿಕರು ವಯೋಸಹಜತೆಯಿಂದ ಹಲ್ಲುಗಳನ್ನು ಕಳೆದುಕೊಳ್ಳುತ್ತಾರೆ. ಈ ಸಂದರ್ಭ ಕತಕ ದಂತ ಅಳವಡಿಕೆಗೆ ಐದಾರು ಬಾರಿ ಆಸ್ಪತ್ರೆಗೆ ಬರಲು ಕಷ್ಟಸಾಧ್ಯವಾದ ಪರಿಸ್ಥಿತಿಯಲ್ಲಿ ಹಿರಿಯ ನಾಗರಿಕರಿರುತ್ತಾರೆ. ಇವರನ್ನು ಗಮನಿಸಿ ಎಬಿ ದಂತ ಮಹಾವಿದ್ಯಾಲಯದಿಂದ ಉಚಿತವಾಗಿ ದಂತಜೋಡಣಾ ಶಿಬಿರವನ್ನು ದೇಶದಲ್ಲಿಯೇ ಮೊದಲ ಬಾರಿಗೆ ೧೯೮೯ ರಲ್ಲಿ ಪ್ರಾರಂಭಿಸಲಾಗಿತ್ತು. ಇಂದಿನವರೆಗೂ ಲಕ್ಷಾಂತರ ಮಂದಿ ದೇಶವ್ಯಾಪಿ ಇಂಥ ಶಿಬಿರದ ಪ್ರಯೋಜನ ಪಡೆದಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ರೋಟರಿ ಜಿಲ್ಲಾ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಎಚ್.ಟಿ.ಅನಿಲ್, ರೋಟರಿಯು ಆರೋಗ್ಯ ಸಿರಿ ಯೋಜನೆ ಮೂಲಕ ರೋಟರಿ ಜಿಲ್ಲೆಯಲ್ಲಿ ಆರೋಗ್ಯ ಸಂಬಂಧಿತ ಅನೇಕ ಮಹತ್ವದ ಯೋಜನೆ ಜಾರಿಗೊಳಿಸುತ್ತಿದೆ. ರೋಟರಿಯಿಂದಾಗಿ ವಿಶ್ವದಲ್ಲಿಯೇ ಪೋಲಿಯೋ ಸೋಂಕು ಶೇ.೯೯ ರಷ್ಟು ನಿರ್ಮೂಲನೆಯಾಗಿದ್ದು ಪಾಕಿಸ್ತಾನ ಮತ್ತು ಅಫಘಾನಿಸ್ತಾನ ಹೊರತು ಪಡಿಸಿ ಬೇರೆ ದೇಶಗಳು ಪೋಲಿಯೋ ಮುಕ್ತವಾಗಿದೆ. ಪೋಲಿಯೋ ಜಗತ್ತಿನಿಂದಲೇ ಕಣ್ಮರೆಯಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗುವ ದಿನಗಳು ಸನಿಹದಲ್ಲಿದೆ. ಇದಕ್ಕೆ ರೋಟರಿ ಎಂಬ ಜಾಗತಿಕ ಸೇವಾ ಸಂಸ್ಥೆಯ ಕೊಡುಗೆ ಮಹತ್ತರವಾದದ್ದು ಎಂದರು.
ಅಶ್ವಿನಿ ಆಸ್ಪತ್ರೆಯ ಕಾರ್ಯದರ್ಶಿ ರಾಜಾ ನಂಜಪ್ಪ ಮಾತನಾಡಿ, ಕೋವಿಡ್ ಸಂದರ್ಭದ ೨ ವರ್ಷಗಳ ಕಾಲ ಅಶ್ವಿನಿ ಆಸ್ಪತ್ರೆಯು ೪೫,೬೦೦ ಕೋವಿಡ್ ಪೀಡಿತರಿಗೆ ಆಶ್ರಯದ ಮೂಲಕ ಚಿಕಿತ್ಸೆ ನೀಡಿದ ದಾಖಲೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಆರೋಗ್ಯ ಸಂಬಂಧಿತ ವಿವಿಧ ಶಿಬಿರಗಳನ್ನು ಆಯೋಜಿಸಲಾಗುತ್ತದೆ ಎಂದರು.
ಅಶ್ವಿನಿ ಆಸ್ಪತ್ರೆಯ ಟ್ರಸ್ಟಿ ಗೋಖಲೆ, ಹಿರಿಯ ಪತ್ರಕರ್ತ ಜಿ.ರಾಜೇಂದ್ರ, ರೋಟರಿ ಮಡಿಕೇರಿ ವುಡ್ಸ್‌ನ ಕಾರ್ಯದರ್ಶಿ ಕೆ.ವಸಂತ್ ಕುಮಾರ್, ಅಶ್ವಿನಿ ಆಸ್ಪತ್ರೆಯ ಸಲಹೆಗಾರ ಛಾಯಾ ನಂಜಪ್ಪ, ರೋಟರಿ ವುಡ್ಸ್ ಗೌರವ ಸಲಹೆಗಾರ ಬಿ.ಜಿ.ಅನಂತಶಯನ, ಅಶ್ವಿನಿ ಆಸ್ಪತ್ರೆಯ ಟ್ರಸ್ಟಿ ಮೋಹನ್ ದಾಸ್, ರೋಟರಿ ವುಡ್ಸ್ ಸದಸ್ಯರು ಪಾಲ್ಗೊಂಡಿದ್ದರು. ಶಿಬಿರದಲ್ಲಿ ೨೦ ಜನರಿಗೆ ಕೃತಕ ದಂತ ಪಂಕ್ತಿ ಅಳವಡಿಸಲಾಯಿತು.