ಆಲಮೇಲ ಪಟ್ಟಣದಲ್ಲಿ ಸೋಮವಾರ ಗ್ರೇಡ್-4 ಪೊಲೀಸ್ ಠಾಣೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಅಶೋಕ ಮನಗೂಳಿ ಭೂಮಿಪೂಜೆ ನೆರವೇರಿಸಿದರು. ಸಾಧಿಕ್ ಸುಂಬಡ, ಅಶೋಕ ಕೊಳಾರಿ, ಬಸವರಾಜ ಬಾಗೇವಾಡಿ, ರಾಹುಲ ಯಂಟಮಾನ, ದಯಾನಂದ ನಾರಾಯಣಕರ ಇತರರಿದ್ದರು. 
ಜಿಲ್ಲೆ

ಆಲಮೇಲ ಮಾದರಿ ಪಟ್ಟಣವಾಗಿಸಲು ಬದ್ಧ..!

Vijayapura - Desk - Gurappa Lokuri

ಆಲಮೇಲ: ಜನತೆಯ ಹಿತಕ್ಕಾಗಿ ಹಗಲು-ರಾತ್ರಿ ಸೇವೆ ಸಲ್ಲಿಸುವ ಕಾನೂನು ರಕ್ಷಕರಾದ ಪೊಲೀಸರ ಆರೋಗ್ಯ, ಹಿತ ಕಾಪಾಡುವುದು ಸರ್ಕಾರದ ಜವಾಬ್ದಾರಿ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ ಉಪವಿಭಾಗ ವಿಜಯಪುರದ ವತಿಯಿಂದ ಆಲಮೇಲ ಪಟ್ಟಣದಲ್ಲಿ ಗ್ರೇಡ್-4 ಪೊಲೀಸ್ ಠಾಣೆ ಕಟ್ಟಡ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿ, ಪೊಲೀಸ್ ಠಾಣೆ ನೂತನ ಕಟ್ಟಡಕ್ಕೆ 88 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ ಎಂದರು.

ಆಲಮೇಲದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ 8 ಕೋಟಿ ರೂ., ಅಗ್ನಿಶಾಮಕ ಠಾಣೆಗೆ 3.5 ಕೋಟಿ ರೂ., ಬಾಲಕರ ವಸತಿ ನಿಲಯಕ್ಕೆ 5 ಕೋಟಿ ರೂ., ಮಂಜೂರಾಗಿದ್ದು ಆಲಮೇಲ ಪಟ್ಟಣಕ್ಕೆ ನನ್ನ ಮುಂದಿನ ಅಧಿಕಾರ ಅವಧಿಯಲ್ಲಿ ಇನ್ನೂ ಹೆಚ್ಚಿನ ಅಭಿವದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಮಾದರಿ ಪಟ್ಟಣವನ್ನಾಗಿಸುವೆ ಎಂದರು.

ಪಿಎಸ್‌ಐ ಅರವಿಂದ ಅಂಗಡಿ ಮಾತನಾಡಿ, ಈಗಿರುವ ಪೊಲೀಸ್ ಠಾಣೆ ಸಂಪೂರ್ಣ ಶಿಥಿಲವಾಗಿತ್ತು. ನೂತನ ಕಟ್ಟಡ ನಿರ್ಮಾಣವಾಗುತ್ತಿರುವುದು ಸಂತಸ ತಂದಿದೆ ಎಂದರು.

ಪ.ಪಂ ಮುಖ್ಯ ಅಧಿಕಾರಿ ಸುರೇಶ ನಾಯಕ, ಪ.ಪಂ ಅಧ್ಯಕ್ಷ ಸಾಧಿಕ್ ಸುಂಬಡ, ಗ್ಯಾರಂಟಿ ಯೋಜನೆ ಅಧ್ಯಕ್ಷ ಅಶೋಕ ಕೊಳಾರಿ, ಕಷಿ ಮಾರುಕಟ್ಟೆ ಅಧ್ಯಕ್ಷ ಬಸವರಾಜ ಬಾಗೇವಾಡಿ ಪ.ಪಂ. ಸದಸ್ಯ ರಾಹುಲ ಯಂಟಮಾನ ದಯಾನಂದ ನಾರಾಯಣಕರ, ಡಾ. ಸಂಜೀವಕುಮಾರ ಯಂಟಮಾನ, ಭಾಗ್ಯವಂತ ಆಲಮೇಲಕಾರ, ಮೈಬೂಬ ಮಸಳಿ, ಮಲ್ಲು ಅಚಲೇರಿ, ಗುತ್ತಿಗೆದಾರ ಮಡಿವಾಳಯ್ಯ ಹಿರೇಮಠ, ಪೊಲೀಸ್ ಸಿಬ್ಬಂದಿ ಇದ್ದರು. ಶ್ರೀಶೈಲ ಮಠಪತಿ ಕಾರ್ಯಕ್ರಮ ನಿರೂಪಿಸಿದರು.